ಬಳ್ಳಾರಿ: ಆ ಎಂಟು ತಿಂಗಳ ಕಾಲ ನನ್ನಲ್ಲಿ ಒಂದು ರೀತಿಯ ಭಯ ಆವರಿಸಿತ್ತು. ಜೀವದ ಹಂಗನ್ನೇ ತೊರೆದು ನಾವಲ್ಲಿ ಕೆಲಸ ಮಾಡಿದೆವು. ಆ ಭಯದಷ್ಟೇ ಹೊಸ ಅನುಭವವೂ ಕೂಡ ಆಯಿತು. ಯುದ್ಧ ಅಂದರೆ ಹೇಗಿರುತ್ತೆ ಎಂಬೋದನ್ನ ನಾವ್ ಕಣ್ಣಾರೆ ಕಂಡೆವು.
ಹೌದು.. ಇದು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ, 2004 ರಲ್ಲಿ ನಿವೃತ್ತಿ ಹೊಂದಿ ಇಂದು ಬಳ್ಳಾರಿಯ ಮರಿಸ್ವಾಮಿ ಮಠದ ಪ್ರದೇಶದಲ್ಲಿ ಕುಟುಂಬ ಸಮೇತ ವಾಸವಾಗಿರುವ ರಾಯಚೂರು ಜಿಲ್ಲೆಯ ಮೂಲದ ಎನ್ಸಿಓ ರುದ್ರ ಮುನಿಸ್ವಾಮಿಯವರ ಮಾತು. ಅಂದು ಅವರು ಕಂಡ ರಣರಂಗದ ಅನುಭವಗಳನ್ನು ಈಟಿವಿ ಭಾರತ್ಗೆ ತಿಳಿಸುತ್ತಾ....
ಅದು ಕಾರ್ಗಿಲ್ ಯುದ್ಧ ಸಮಯ, ಆಗ ನಾನು ಕಾನ್ಪುರದಲ್ಲಿದ್ದೆ. ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನ ಹೊತ್ತು ತರುವ ಬೆಟಾಲಿಯನ್ ವಾಹನದ ಎನ್ಸಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಕಾನ್ಪುರದಿಂದ ಅಂದಾಜು 1500 ಕಿಲೊಮೀಟರ್ ಕ್ರಮಿಸಬೇಕಿತ್ತು. ಅಲ್ಲಿಂದ ಬಟಾಲಿಯನ್ ವಾಹನದ ಬೆಂಗಾವಲು ಪಡೆಯನ್ನು (350 ಮಂದಿ) ಕರೆದುಕೊಂಡು ಪಾಕಿಸ್ತಾನದ ಗಡಿ ಭಾಗಕ್ಕೆ ಹೋಗುವಾಗ ಸಾಕಷ್ಟು ಭಯ ನಮ್ಮನ್ನಾವರಿಸಿತ್ತು.
ಹಗಲು- ರಾತ್ರಿಯಿಡೀ 24 ಗಂಟೆಗಳ ಕಾಲ ಕಣ್ಣು ರೆಪ್ಪೆಗಳನ್ನ ಹಾರಿಸದೇ ಕಾರ್ಯನಿರ್ವಹಿಸುತ್ತಿದ್ದೆವು. ಅದರಂತೆಯೇ 8 ತಿಂಗಳು ಕಾಲ ಕರ್ತವ್ಯ ನಿರ್ವಹಿಸಿರುವೆ. ಕಾರ್ಗಿಲ್ ಯುದ್ಧದ ಸ್ವರೂಪ ಹೇಗಿರುತ್ತೆ ಎಂಬ ಪರಿಕಲ್ಪನೆಯೇ ನನಗಿರಲಿಲ್ಲ. ಆದ್ರೂ ಕೂಡ ಶಸ್ತ್ರಾಸ್ತ್ರ, ಮದ್ದುಗುಂಡುಗಳುಳ್ಳ ಈ ಬಟಾಲಿಯನ್ ವಾಹನಗಳನ್ನ ದೊಡ್ಡ ದೊಡ್ಡ ಬೆಟ್ಟ- ಗುಡ್ಡಗಳಲ್ಲೇ ಚಲಾಯಿಸಿಕೊಂಡು ಹೋಗೊದು ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಉತ್ತರ ಪ್ರದೇಶ ರಾಜ್ಯದ ಕಾನ್ಪುರದಿಂದ ಪಂಜಾಬ್ ರಾಜ್ಯದ ಗುರುದಾಸಪುರ, ಪಠಾಣಕೋಟ ಹಾಗೂ ಸಾಂಬಾ ಸೆಕ್ಟರ್ (ಪಾಕಿಸ್ತಾನ ಗಡಿಭಾಗದ ಪ್ರದೇಶ) ನಾಲಾದಲ್ಲಿ ಬಟಾಲಿಯನ್ ಇರಿಸಲಾಗಿತ್ತು.
ಅಲ್ಲಿಂದ ಕಾರ್ಗಿಲ್ಗೆ ಅಂದಾಜು 400 ಕಿಲೊಮೀಟರ್ ದೂರ ಇತ್ತು. ದೇಶದ ನಾಲ್ಕು ಮೂಲೆಗಳಲ್ಲೂ ಕೂಡ ಯಾವುದೇ ಕ್ಷಣದಲ್ಲೂ ಎದುರಾಳಿಗಳು ಅಟ್ಯಾಕ್ ಮಾಡ್ಬಹುದೆಂಬ ಭಯ ನಮ್ಮನ್ನ ಆವರಿಸಿತ್ತು. ಆಗ ತಾನೇ ನನಗೆ ಎರಡು ಮಕ್ಕಳಿದ್ದರು. ಅವರು ಕೂಡ ಬಹಳ ಸಣ್ಣವರಿದ್ದರು. ಅದ್ಯಾವುದನ್ನೇ ಲೆಕ್ಕಿಸದೇ ನಾನು ಬಟಾಲಿಯನ್ ಆಪರೇಟರ್ ಆಗಿ ಕಾರ್ಯನಿರ್ವಹಿಸಿದೆ ಎಂದು ದೇಶ ಸೇವೆಗೆ ಜೀವನ ಮುಡಿಪಿಟ್ಟ ಅಂದಿನ ದಿನಗಳ ನೆನಪುಗಳನ್ನು ಹಂಚಿಕೊಂಡರು...