ಕಾನ್ಪುರ್: ಶಾಲೆಯಲ್ಲಿ ತಾನು ಹೇಳಿರುವ ಮಾತು ಕೇಳಲಿಲ್ಲ ಎಂದು ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಕಾನ್ಪುರದ ಡೆಹತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಶಿಕ್ಷಕ ಶೈಲೇಂದ್ರ ರಜಪೂತ್ ನಿನ್ನೆ ಈ ಕೃತ್ಯವೆಸಗಿದ್ದಾನೆ. ಈ ಹಿಂದೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಕ್ಕಾಗಿ 3 ತಿಂಗಳ ಕಾಲ ಶಾಲೆಯಿಂದ ಅಮಾನತು ಶಿಕ್ಷೆ ಅನುಭವಿಸಿದ್ದ ಆರೋಪಿ ಮತ್ತೆ ಶಾಲೆಗೆ ವಾಪಸ್ ಆಗಿದ್ದ. ಇದೀಗ ಅದೇ ಕೋಪದಲ್ಲಿ ಈ ಕುಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳಲು ಸಿದ್ಧಳಾಗುತ್ತಿದ್ದ ವೇಳೆ ಆಕೆಯ ಮೇಲೆ ಏಕಾಏಕಿಯಾಗಿ ಗುಂಡು ಹಾರಿಸಿದ್ದಾನೆ. ಬಾಲಕಿಗೆ ಮೂರು ಗುಂಡು ತಗುಲಿರುವ ಕಾರಣ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಧಾವಿಸಿ ಬಂದು ಶಿಕ್ಷಕನಿಗೆ ಥಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಅನುರಾಗ್ ವತ್ಸಾ ತಿಳಿಸಿದ್ದಾರೆ.