ಕಾನ್ಪುರ (ಉತ್ತರ ಪ್ರದೇಶ): ಮಯನ್ಮಾರ್ನ ಮಿಲಿಟರಿ ದಂಗೆ ಹಾಗೂ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಮತ್ತು ಇತರ ಉನ್ನತ ರಾಜಕೀಯ ನಾಯಕರ ಬಂಧನದ ಪರಿಣಾಮ ಭಾರತದ ಮೇಲೂ ಬೀರಿದೆ ಎಂದು ಮಯನ್ಮಾರ್ನ ಭಾರತದ ರಾಯಭಾರಿ ಸೌರಭ್ ಕುಮಾರ್ ಅವರ ತಂದೆ ಡಾ. ಸಂತೋಷ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಯನ್ಮಾರ್ನಲ್ಲಿ ಉನ್ನತ ಅಧಿಕಾರಿಗಳ ಗೃಹಬಂಧನದ ಸುದ್ದಿ ಬೆಳಕಿಗೆ ಬಂದ ನಂತರದಲ್ಲಿ ಡಾ. ಸಂತೋಷ್ ಕುಮಾರ್ ಅವರ ಮಗನ ಯೋಗಕ್ಷೇಮಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳು ಹಾಗೂ ಸಂದೇಶಗಳಿಂದ ತುಂಬಿ ಹೋಗಿದ್ದವು.
ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗಗಳ ಮುಖ್ಯಸ್ಥರಾಗಿರುವ ಡಾ. ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಮಗ ಸುರಕ್ಷಿತವಾಗಿದ್ದಾರೆ. ಮಯನ್ಮಾರ್ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿಸಿದರು.
ಮಯನ್ಮಾರ್ನಲ್ಲಿ ಭಾರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾರತೀಯ ರಾಯಭಾರಿಗಳ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ, ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಮಯನ್ಮಾರ್ ಮಿಲಿಟರಿಯು ಭಾರತೀಯ ರಾಯಭಾರಿಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ ಎಂದರು.
ದೇಶದ ನಿಯಂತ್ರಣವನ್ನು ವಶಪಡಿಸಿಕೊಂಡ ಮಯನ್ಮಾರ್ ಮಿಲಿಟರಿ ಒಂದು ದಿನದ ಬಳಿಕ, ಬಂಧಿತ ಬಹುಸಂಖ್ಯಾತ ಪ್ರಾದೇಶಿಕ ಮತ್ತು ರಾಜ್ಯ ಮುಖ್ಯಮಂತ್ರಿಗಳನ್ನು ಬಿಡುಗಡೆ ಮಾಡಿತು. ಆದರೆ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಮತ್ತು ಅಧ್ಯಕ್ಷ ಯು ವಿನ್ ಮೈಂಟ್ ಅವರ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.