ಲಖನೌ: ಕೊರೊನಾ ವೈರಸ್ ಸೋಂಕಿನಿಂದ ಬಳಲಿ ಸುದೀರ್ಘ ಹೋರಾಟದ ನಂತರ ಗುಣಮುಖರಾದ ಬಾಲಿವುಡ್ನ ಖ್ಯಾತ ಗಾಯಕಿ ಕನಿಕಾ ಕಪೂರ್ ಈಗ ತಮ್ಮ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಲಖನೌದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ (ಕೆಜಿಎಂಯು) ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಕನಿಕಾ, ಕೊರೊನಾ ಮುಕ್ತರಾಗಿ ಕೆಲದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಇಲ್ಲಿಂದ ಕೊರೊನಾ ಮುಕ್ತರಾದ ಅನೇಕರು ಈಗಾಗಲೇ ತಮ್ಮ ಪ್ಲಾಸ್ಮಾ ನೀಡಿದ್ದಾರೆ. ಸದ್ಯ ಕನಿಕಾ ಕಪೂರ್ ಸಹ ಕೊರೊನಾ ವೈರಸ್ ಚಿಕಿತ್ಸೆಗೆ ತಮ್ಮ ಸಹಕಾರ ನೀಡುವ ನಿಟ್ಟಿನಲ್ಲಿ ಪ್ಲಾಸ್ಮಾ ನೀಡಲು ನಿರ್ಧರಿಸಿದ್ದಾರೆ.
ಈಗಾಗಲೇ ಈ ಕುರಿತು ಕನಿಕಾ ಕಪೂರ್ ಕೆಜಿಎಂಯು ಆಸ್ಪತ್ರೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಕೆಜಿಎಂಯು ಕುಲಪತಿ ಪ್ರೊ. ಎಂಎಲ್ಬಿ ಭಟ್, "ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಬಯಸಿದ ವಿಷಯ ತಿಳಿದಿದೆ. ಸೋಂಕು ತಗುಲಿದ ವ್ಯಕ್ತಿಗಳ ಚಿಕಿತ್ಸೆಗಾಗಿ ಗಾಯಕಿ ಕನಿಕಾ ಕಪೂರ್ ಅವರ ಪ್ಲಾಸ್ಮಾ ದಾನ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ." ಎಂದು ಹೇಳಿದ್ದಾರೆ.
ಕೋವಿಡ್-19 ಚಿಕಿತ್ಸೆಗಾಗಿ ಕನ್ವಲ್ಸೆಂಟ್ ಪ್ಲಾಸ್ಮಾ ವಿಧಾನವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಈ ವಿಧಾನದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ (ರಕ್ತದ ಕಣ) ವನ್ನು ಗಂಭೀರ ಕೊರೊನಾ ಪೀಡಿತ ರೋಗಿಗಳ ದೇಹಕ್ಕೆ ವರ್ಗಾಯಿಸಲಾಗುತ್ತದೆ. ವೈರಸ್ನಿಂದ ಗುಣಮುಖರಾದವರ ರಕ್ತದಲ್ಲಿ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ನಿರ್ಮಾಣವಾಗಿರುತ್ತವೆ. ಅಂದರೆ ರೋಗಮುಕ್ತರಾದವರ ರಕ್ತದಲ್ಲಿನ ರೋಗನಿರೋಧಕ ಶಕ್ತಿಯನ್ನು ರೋಗಿಗಳ ದೇಹಕ್ಕೆ ವರ್ಗಾಯಿಸುವುದು ಕನ್ವಲ್ಸೆಂಟ್ ಪ್ಲಾಸ್ಮಾ ಥೆರಪಿಯಾಗಿದೆ.