ಹಿಮಾಚಲ ಪ್ರದೇಶ: ಚಹಾ ಅಂದರೆ ಜನರಿಗೆ ಅಚ್ಚುಮೆಚ್ಚು. ಜಗತ್ತಿನಾದ್ಯಂತ ಅನೇಕರು ಬೆಳಗ್ಗೆ ಒಂದು ಕಪ್ ಚಹಾದೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ವಿಶ್ವದ ಅನೇಕ ದೇಶಗಳು ಚಹಾವನ್ನು ಉತ್ಪಾದಿಸಲು ಇದು ಕೂಡ ಒಂದು ಕಾರಣವಾಗಿದೆ. ಭಾರತದಲ್ಲಿ ಅಸ್ಸೋಂ, ಡಾರ್ಜಿಲಿಂಗ್ ಮತ್ತು ಕೇರಳದಲ್ಲಿ ಚಹಾವನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತದೆ. ಆದರೆ ಹಿಮಾಚಲ ಪ್ರದೇಶದ ಕಾಂಗ್ಡಾದ ಚಹಾ ವಿಶಿಷ್ಟವಾದ ಗುರುತನ್ನು ಹೊಂದಿದೆ.
ಬ್ರಿಟಿಷರು ಚಹಾವನ್ನು ಬೆಳೆಯುವ ಸಲುವಾಗಿ ಕಾಂಗ್ಡಾದ ಪಾಲಂಪುರ್ದಲ್ಲಿ, 1850ರಲ್ಲಿ ಚಹಾ ತೋಟವನ್ನು ಮಾಡಿದ್ದರು. ಆ ತೋಟಕ್ಕೆ ಚೀನಾದಿಂದ ಸಸ್ಯಗಳನ್ನು ತಂದಿದ್ದರಿಂದ ಅಲ್ಲಿ ಬೆಳೆದ ಚಹಾವನ್ನು ಚೀನಿ ಹೈಬ್ರಿಡ್ ಚಹಾ ಎಂದೂ ಕರೆಯುತ್ತಾರೆ.
ಕಾಂಗ್ಡಾ ಚಹಾ ಸುವಾಸನೆ ಮತ್ತು ಪರಿಮಳ ಭರಿತವಾಗಿದ್ದು, ಇತರ ಬಗೆಯ ಚಹಾಗಳಿಗಿಂತ ಭಿನ್ನವಾಗಿರುತ್ತದೆ. ವಿಶೇಷ ಗುಣಮಟ್ಟದ ಕಾರಣಗಳಿಂದ, ಅನೇಕ ದೇಶಗಳ ಗ್ರಾಹಕರು ಕಾಂಗ್ಡಾ ಚಹಾವನ್ನು ಹೆಚ್ಚು ಇಷ್ಟಪಡುತ್ತಾರೆ.
ಕಾಂಗ್ಡಾ ಚಹಾವು ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಇದರ ಉತ್ಪಾದನೆಯು ಡಾರ್ಜಿಲಿಂಗ್ ಅಥವಾ ಅಸ್ಸೋಂನಲ್ಲಿ ಉತ್ಪಾದಿಸುವ ಚಹಾಕ್ಕಿಂತ ಕಡಿಮೆ ಇದ್ದರೂ, ಕಾಂಗ್ಡಾ ಚಹಾವನ್ನು ಅದರ ವಿಶಿಷ್ಟ ಗುಣಮಟ್ಟದಿಂದಾಗಿ ಅನೇಕ ದೇಶಗಳ ಗ್ರಾಹಕರು ಹೆಚ್ಚು ಬಯಸುತ್ತಾರೆ.
ಬ್ರಿಟಿಷರು ಭಾರತ ತೊರೆದ ನಂತರ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸದಿದ್ದರೂ, ಕಾಂಗ್ಡಾ ಚಹಾವು ಪ್ರಪಂಚದಾದ್ಯಂತದ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಚಹಾವನ್ನು ಉತ್ತೇಜಿಸುವಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರದ ಪಾತ್ರವೂ ಗಮನಾರ್ಹವಾಗಿದ್ದು, ಕಾಂಗ್ಡಾ ಬ್ಲಾಕ್ ಟೀ ಯಿಂದ ಗ್ರೀನ್ ಟೀವರೆಗೆ ಎಲ್ಲಾ ಬಗೆಯ ಚಹಾವನ್ನು ಉತ್ಪಾದಿಸಲಾಗುತ್ತದೆ. ಇಲ್ಲಿನ ಚಹಾ ಉದ್ಯಮವು ಸುಮಾರು ಆರು ಸಾವಿರ ಜನರಿಗೆ ಉದ್ಯೋಗ ನೀಡಿದ್ದು, ಇಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಚಹಾವನ್ನು ರಫ್ತು ಮಾಡಲಾಗುತ್ತದೆ.
ರುಚಿ, ಸುವಾಸನೆ ಮತ್ತು ಗುಣಮಟ್ಟದಿಂದ ಕಾಂಗ್ಡಾ ಚಹಾವನ್ನು ವಿಶ್ವದ ಅತ್ಯುತ್ತಮ ಟೀ ಎಂದು ಪರಿಗಣಿಸಲಾಗಿದೆ. ಕಾಂಗ್ಡಾ ಟೀ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದು, ಆರಂಭದಲ್ಲಿ ಈ ಚಹಾವನ್ನು ಇಂಗ್ಲೆಂಡ್, ಸ್ಪೇನ್ ಮತ್ತು ಹಾಲೆಂಡ್‌ಗೆ ಮಾತ್ರ ರಫ್ತು ಮಾಡಲಾಗುತ್ತಿತ್ತು. ಆದರೆ ಇಂದು ಫ್ರಾನ್ಸ್, ಜರ್ಮನಿ, ಅಫ್ಘಾನಿಸ್ತಾನ, ಏಷ್ಯಾ ಮತ್ತು ಯುರೋಪಿನ ಅನೇಕ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ.
ಅಮೆರಿಕಕ್ಕೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಾಂಗ್ಡಾ ಚಹಾವನ್ನು ಉಡುಗೊರೆಯಾಗಿ ನೀಡಿದ್ದರು.