ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು, ಇದೀಗ ಅಧಿಕಾರದ ಚುಕ್ಕಾಣಿಗಾಗಿ ಉಭಯ ಪಕ್ಷಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಒಂದೆಡೆ ನಿತೀಶ್ ಕುಮಾರ್ ಸಿಎಂ ಆಗಬಹುದು ಎಂದು ವಿಶ್ಲೇಷಿಸುತ್ತಿದ್ದರೆ. ಇನ್ನೊಂದೆಡೆ ತೇಜಸ್ವಿ ಯಾದವ್ಗೆ ಸಿಎಂ ಸ್ಥಾನ ಬಿಟ್ಟುಕೊಡುವ ಸಿದ್ಧತೆ ನಡೆದಿದೆ ಎಂಬ ಚರ್ಚೆ ಸಹ ಮೇಲೆದ್ದಿದೆ.
ಆದರೆ, ಇದಕ್ಕೂ ಮೊದಲೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿದ್ದು, ಮುಖ್ಯವಾಗಿ ರಾಮಮಂದಿರ ನಿರ್ಮಾಣ ಸಮಿತಿಯ ಸದಸ್ಯ ಕಾಮೇಶ್ವರ ಚೌಪಾಲ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಬಿಜೆಪಿಯಿಂದ ಸ್ಪರ್ಧಿಸಿ ಭರ್ಜರಿ ಮತಗಳಿಂದ ಜಯಗಳಿಸಿರುವ ಕಾಮೇಶ್ವರ್ ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಇಷ್ಟೇ ಅಲ್ಲದೆ ಕಳೆದ ಬಾರಿಯ ಅಧಿಕಾರವಧಿಯಲ್ಲಿದ್ದ ಹಲವು ಮಂತ್ರಿಗಳ ಹೆಸರನ್ನು ಕೈಬಿಡುವ ಸೂಚನೆಯಿದ್ದು, ಹೊಸ ಮುಖಗಳು ಸಂಪುಟದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಹಾರ ಸರ್ಕಾರ ರಚನೆಯ ಹಿನ್ನೆಲೆ ಪಾಟ್ನಾಗೆ ಆಗಮಿಸಿದ ಕಾಮೇಶ್ವರ್ಗೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ. ಮುಂದಿನ ಉಪಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು, ಈ ವೇಳೆ ಮಾತನಾಡಿದ ಕಾಮೇಶ್ವರ್, ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಪಕ್ಷ ನೀಡುವ ಯಾವುದೇ ಹುದ್ದೆ ಅಥವಾ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ಸಿಎಂ ಸ್ಥಾನ ಸಂಬಂಧ ಎನ್ಡಿಎ ಅಡಿ ನಿರ್ಧಾರವಾಗಿದೆ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿಯೇ ಬಿಹಾರ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದಿದ್ದಾರೆ.
ಇನ್ನು ಕಾಮೇಶ್ವರ್ ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಮುಂಚೂಣಿ ನಾಯಕ ಎನಿಸಿಕೊಂಡಿದ್ದರು. ಅಲ್ಲದೇ ರಾಮಮಂದಿರ ನಿರ್ಮಾಣ ಸಮಿತಿಯಲ್ಲಿ ಸ್ಥಾನ ಪಡೆದ ಬಿಹಾರದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಇದಲ್ಲದೇ ಮಂದಿರ ಶಂಕುಸ್ಥಾಪನೆ ಸಂದರ್ಭ ಇಟ್ಟಿಗೆ ಕಟ್ಟುವ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.