ತಮಿಳುನಾಡು/ಪೆರಂಬಲೂರು: ಉಟ್ಟ ಸೀರೆಯನ್ನು ಬಿಚ್ಚಿ ಎಸೆದು ನದಿಯಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಿದ ಮಹಿಳೆಯರನ್ನು ತಮಿಳುನಾಡು ಸರ್ಕಾರ ಕಲ್ಪನಾ ಚಾವ್ಲಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ನಾಳೆ ಸ್ವಾತಂತ್ರ್ಯ ದಿನದ ಹಿನ್ನೆಲೆ ಈ ಮೂವರು ಮಹಿಳೆಯರನ್ನು ರಾಜ್ಯ ಸರ್ಕಾರ ಗೌರವಿಸಲಿದೆ. ಸೆಂಥಮಿಜ್ ಸೆಲ್ವಿ (38), ಮುತಮ್ಮಲ್ (34) ಮತ್ತು ಆನಂದವಲ್ಲಿ (34) ಜಂಟಿಯಾಗಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು, ನಾಳೆಯ ಸ್ವಾತಂತ್ರ್ಯ ದಿನಾಚರಣೆಯಂದು ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರದ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಘಟನೆ ಬಗ್ಗೆ ವಿವರಿಸಿರುವ ಸೆಂಥಮಿಜ್ ಸೆಲ್ವಿ , ಕಳೆದ ಆಗಸ್ಟ್ 6 ರಂದು ಕೊಟ್ಟರೈ ಅಣೆಕಟ್ಟಿಯಲ್ಲಿ 12 ಯುವಕರ ತಂಡ ಮೋಜು ಮಸ್ತಿಗಾಗಿ ನೀರಿಗೆ ಇಳಿದಿತ್ತು. ಸ್ಥಳದಲ್ಲಿ ಬಟ್ಟೆ ತೊಳೆಯುತ್ತಿದ್ದ ನಾವು ಜಲಾಶಯದಲ್ಲಿ ಸಾಕಷ್ಟು ಆಳ ಮತ್ತು ಕೆಸರಿದೆ ಎಂದು ಎಚ್ಚರಿಸಿದೆವು. ಅದರೆ ಇದಕ್ಕೆ ಕಿವಿಗೊಡದ ನಾಲ್ವರು ಯುವಕರು ನೀರಿಗೆ ಇಳಿದರು. ಈ ವೇಳೆಗಾಗಲೇ ನಾವು ಬಟ್ಟೆ ಒಗೆಯುದನ್ನು ಮುಗಿಸಿ ಮನೆಗೆ ತೆರಳುತ್ತಿದ್ದೆವು.
ಆದರೆ ಯುವಕರು ನೀರಿನ ಸೆಳೆತಕ್ಕೆ ಸಿಲುಕಿದ್ದನ್ನು ಕಂಡ ನಾವು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಮುಳುಗುತ್ತಿದ್ದ ಇಬ್ಬರು ಯುವಕರಿಗೆ ನೀಡಿ ಬಚಾವ್ ಮಾಡಿದೆವು ಎಂದಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಮತ್ತಿಬ್ಬರು ಯುವಕರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.