ತಿರುವನಂತಪುರಂ(ಕೇರಳ): ಕಡಕ್ಕಾವೂರಿನಲ್ಲಿ ತನ್ನ ಹದಿಹರೆಯದ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತ ಆರೋಪಿ ಮಹಿಳೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪೊಕ್ಸೊ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ತಿರುವನಂತಪುರಂ ಪೋಕ್ಸೊ ನ್ಯಾಯಾಲಯವು ಪ್ರಾಸಿಕ್ಯೂಷನ್ ಆರೋಪಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಾಸಿಕ್ಯೂಷನ್ ಮಂಡಿಸಿದ ಪ್ರಕರಣವು ನಂಬಲರ್ಹವಾಗಿದೆ ಹಾಗೂ ಈ ಹಂತದಲ್ಲಿ ಆರೋಪಿ ಮಹಿಳೆಗೆ ಜಾಮೀನು ನೀಡುವುದರಿಂದ ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯವು ತಿಳಿಸಿದೆ.
ಪೊಲೀಸರಿಗೆ ಸಲ್ಲಿಸಿದ ಸಿಡಬ್ಲ್ಯೂಸಿ ವರದಿಯು ಅಪ್ರಾಪ್ತ ಬಾಲಕ ತನ್ನ ತಾಯಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾನೆ ಎಂದು ದೃಢವಾದ ಹೇಳಿಕೆ ನೀಡಿತ್ತು. ಇದರ ಆಧಾರದ ಮೇಲೆ, ನವೆಂಬರ್ 10 ರಂದು ಮಗುವಿಗೆ ಸಲಹೆ ನೀಡಲು ಮತ್ತು ವರದಿಯನ್ನು ಹಸ್ತಾಂತರಿಸಲು ಪೊಲೀಸರು ನಿರ್ದೇಶಿಸಿದ್ದರು. ನಂತರ, ನವೆಂಬರ್ 30 ರಂದು ವರದಿಯನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಇದನ್ನೂ ಓದಿ: ಹಕ್ಕಿ ಜ್ವರದ ಭೀತಿ: ಪಂಚಕುಲದಲ್ಲಿ 20 ಸಾವಿರ ಕೋಳಿಗಳ ಮಾರಣಹೋಮ
ಇದರ ಬೆನ್ನಲ್ಲೇ ಪೊಲೀಸರು ಡಿಸೆಂಬರ್ 18 ರಂದು ಸಿಡಬ್ಲ್ಯೂಸಿ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರು ಮಗುವಿನಿಂದ ರಹಸ್ಯ ಹೇಳಿಕೆ ಮತ್ತು ವೈದ್ಯಕೀಯ ವರದಿಯನ್ನು ಕೋರಿದ್ದಾರೆ.