ಭಾರತದ ಸಮೃದ್ಧಿಯ ಕೀಲಿ ಕೈ ಅದರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿದೆ ಎಂದು ಮಹಾತ್ಮ ಗಾಂಧಿ ಬಲವಾಗಿ ನಂಬಿದ್ದರು. ಆದರೆ, ಏಳು ದಶಕಗಳ ಭಾರತ ಗಣರಾಜ್ಯದುದ್ದಕ್ಕೂ ವಿಕೇಂದ್ರಿಕರಣದ ಉತ್ಸಾಹ ಎಲ್ಲಿಯೂ ಕಾಣಸಿಗದು. ಗ್ರಾಮೀಣರಿಗೆ ಕ್ಷಿಪ್ರ ನ್ಯಾಯದಾನ ಒದಗಿಸುವ ಉದ್ದೇಶದಿಂದ ಗ್ರಾಮ ನ್ಯಾಯಾಲಯಗಳ ಕಾಯ್ದೆಯನ್ನು 2009ರಲ್ಲಿ ಪರಿಚಯಿಸಲಾಗಿದ್ದರೂ, ಅದು ಅನುಷ್ಠಾನ ಕೊರತೆಯಿಂದ ಬಳಲುತ್ತಿದೆ.
ರಾಷ್ಟ್ರೀಯ ಉತ್ಪಾದಕ ಪರಿಷತ್ (ನ್ಯಾಶನಲ್ ಪ್ರೊಡಕ್ಟಿವಿಟಿ ಕೌನ್ಸಿಲ್) ಪ್ರಕಾರ, 200-18ರ ಅವಧಿಯಲ್ಲಿ ಗ್ರಾಮೀಣ ನ್ಯಾಯಾಲಯಗಳಿಗೆ ನೇಮಕಾತಿ ಅಧಿಸೂಚನೆಯನ್ನು ಕೇವಲ 11 ರಾಜ್ಯಗಳು ಮಾತ್ರ ಹೊರಡಿಸಿವೆ. ಉದ್ದೇಶಿತ 320 ಗ್ರಾಮೀಣ ನ್ಯಾಯಾಲಯಗಳ ಪೈಕಿ ಕೇವಲ 204 ಕಾರ್ಯಾರಂಭ ಮಾಡಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ಸೊಸೈಟಿಗಳ ಒಕ್ಕೂಟ (ನ್ಯಾಶನಲ್ ಫೆಡರೇಶನ್ ಆಫ್ ಸೊಸೈಟೀಸ್) ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಹೂಡಿತ್ತು. ಗ್ರಾಮೀಣ ಬಡವರು ಪ್ರಸಕ್ತ ನ್ಯಾಯದಾನ ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ ಹಾಗೂ ನ್ಯಾಯಾಲಯಗಳು ಸಂವಿಧಾನದ ಪರಿಚ್ಛೇದ 35-ಎ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ, ಗ್ರಾಮೀಣ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಹೂಡಲಾಗಿದ್ದ ಮೊಕದ್ದಮೆಯ ಅಂಗವಾಗಿ ಸುಪ್ರೀಂ ನ್ಯಾಯಮಂಡಳಿಯು ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು. ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡಿದ್ದ ತ್ರಿಸದಸ್ಯ ಪೀಠವು, ಗ್ರಾಮೀಣ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿಂತೆ ಇದುವರೆಗೆ ಯಾವ ರಾಜ್ಯಗಳು ಚಾಲನೆ ಕ್ರಮವನ್ನು ಕೈಗೊಂಡಿಲ್ಲವೋ, ಅವು ನಾಲ್ಕು ವಾರಗಳ ಅವಧಿಯೊಳಗೆ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ನಿರ್ದೇಶನವನ್ನು ನೀಡಿತ್ತು. ರಾಜ್ಯ ಸರಕಾರಗಳು ತಮ್ಮ ಸಂಬಂಧಿತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಂದಿಗೆ ಸಮಾಲೋಚಿಸಿ ಈ ನ್ಯಾಯಾಲಯಗಳ ಸ್ಥಾಪನೆ ಹಾಗೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಅದು ಸ್ಪಷ್ಟಪಡಿಸಿತ್ತು. ಛತ್ತೀಸ್‌ಗಡ, ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ ಮತ್ತು ಒಡಿಶಾ ರಾಜ್ಯಗಳು ಪ್ರಮಾಣಪತ್ರಗಳನ್ನು ಹಾಜರುಪಡಿಸಿಲ್ಲ ಎಂಬುದನ್ನು ಗಂಭೀರ ಪ್ರಮಾದ ಎಂದು ಅತ್ಯುಚ್ಚ ನ್ಯಾಯಾಲಯವು ಈ ಹಿಂದಿನ ನಿರ್ದೇಶನಗಳಲ್ಲಿ ಪರಿಗಣಿಸಿದೆ. ಪ್ರಕರಣವನ್ನು ಅತ್ಯುಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿರುವುದರಿಂದ, ಗ್ರಾಮೀಣ ನ್ಯಾಯದಾನ ವ್ಯವಸ್ಥೆಗೆ ಹೊಸ ಭರವಸೆಯೊಂದು ಮೂಡಿದಂತಾಗಿದೆ.
ಭಾರತದಲ್ಲಿ ಹಳ್ಳಿ ಮತ್ತು ಅದರದೇ ಆದ ನ್ಯಾಯದಾನ ಪರಿಕಲ್ಪನೆಗೆ ಸುದೀರ್ಘ ಇತಿಹಾಸವಿದೆ. ಹಳ್ಳಿಗಳಲ್ಲಿ ಹಿರಿಯರನ್ನು ಒಳಗೊಂಡಿದ್ದ ಪಂಚಾಯತಿ ಕಟ್ಟೆ ಅಥವಾ ವ್ಯಾಜ್ಯಗಳ ಇತ್ಯರ್ಥ ವೇದಿಕೆಯನ್ನು ಕಾನೂನುಬದ್ಧ ಎಂದೇ ಪರಿಗಣಿಸಲಾಗಿತ್ತು. ನ್ಯಾಯಾಲಯಗಳ ಮೊರೆ ಹೋಗದಂತೆ ಗ್ರಾಮೀಣರನ್ನು ತಡೆಗಟ್ಟಲು ಇದು ಒಂದು ಕಾರಣವಾಗಿತ್ತು. ಹಳ್ಳಿಗಳಿಗೆ ನ್ಯಾಯದಾನ ಒದಗಿಸುವ ಉದ್ದೇಶದಿಂದ ನಾಲ್ಕು ದಶಕಗಳ ಹಿಂದೆ 30,000 ಕಾನೂನು ಸಮಿತಿಗಳನ್ನು ಸೃಷ್ಟಿಸಲಾಗಿತ್ತು. ಮೂರು ದಶಕಗಳ ಹಿಂದೆ, ಎನ್‌ಟಿಆರ್ ಸರಕಾರವು ಮಂಡಲ ಪ್ರಜಾ ಪರಿಷತ್ ಅನ್ನು ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಚಯಿಸಿದಾಗ, ಕಾಂಗ್ರೆಸ್ ಪಕ್ಷವು ಅದರ ವಿರುದ್ಧ ಮತ ಹಾಕಿತ್ತು. 1995ರಲ್ಲಿ ಎನ್‌ಟಿಆರ್ ಅವರು ಮಸೂದೆಗೆ ಅಂಗೀಕಾರ ದೊರಕಿಸಿಕೊಂಡರೂ, ಒಂದೇ ವರ್ಷದೊಳಗೆ ಅದು ತಿರಸ್ಕೃತವಾಯಿತು. ಮುಂದೆ ಮನಮೋಹನ ಸಿಂಗ್ ಸರಕಾರ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವಂತಹ ಗ್ರಾಮೀಣ ನ್ಯಾಯಾಲಯ ಪರಿಕಲ್ಪನೆಯನ್ನು ಪರಿಚಯಿಸಿತು. ಮೊದಲ ಹಂತದಲ್ಲಿ 5,000 ಹಳ್ಳಿಗಳಲ್ಲಿ ಗ್ರಾಮೀಣ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂಬ ವರದಿಗಳಿದ್ದಾಗ್ಯೂ, ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈಎಸ್‌ಆರ್ ಅವರು ಇದಕ್ಕೆ ವಿರುದ್ಧವಾದ ನಿರ್ಧಾರವನ್ನು ಕೈಗೊಂಡಿದ್ದರು. ಕೊನೆಗೂ ತೆಲಂಗಾಣದಲ್ಲಿ 55 ಹಾಗೂ ಆಂಧ್ರಪ್ರದೇಶದಲ್ಲಿ 82 ಗ್ರಾಮೀಣ ನ್ಯಾಯಾಲಯಗಳನ್ನು ಸ್ಥಾಪಿಸಲಾದರೂ, ಅಲ್ಲಿಂದಾಚೆಗೆ ಯಾವ ಪ್ರಗತಿಯೂ ಆಗಲಿಲ್ಲ. ಒಂದು ವೇಳೆ ನ್ಯಾಯದಾನ ಸೇವೆಗಳ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತಂದಿದ್ದೇ ಆದಲ್ಲಿ ಗ್ರಾಮೀಣ ಜನತೆಗೆ ಅದರಿಂದ ಸಾಕಷ್ಟು ಅನುಕೂಲಗಳಾಗಲಿವೆ.
1979ರ ಹಾಲು ಕಲಬೆರಕೆ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್ ಜುಲೈ 2019ರಲ್ಲಿ ವಜಾಗೊಳಿಸಿತು. ಈ ಪ್ರಕರಣವನ್ನು ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೂಡಲಾಗಿತ್ತು. ನಂತರ ಅದು ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರಿದು, ಹೈಕೋರ್ಟ್‌ಗೆ ಹೋಗಿ, ಅಲ್ಲಿಂದ ಸುಪ್ರೀಂ ಕೋರ್ಟ್‌ಗೆ ಬಂದಿತ್ತು. ಸದರಿ ಪ್ರಕರಣ ಈ ರೀತಿ ನಾಲ್ಕು ದಶಕಗಳ ಕಾಲ ಎಳೆದಾಡಿಕೊಂಡು ಬಂದಿತ್ತು. ಆಧೀನ ನ್ಯಾಯಾಲಯಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಇಂತಹ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಭಾರತದ ನ್ಯಾಯದಾನ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂದರೆ, ನ್ಯಾಯಕ್ಕಾಗಿ ನಡೆಸುವ ಹೋರಾಟ ಪ್ರಕ್ರಿಯೆಯಲ್ಲಿ ಕಕ್ಷಿದಾರ ತನ್ನೆಲ್ಲ ಆದಾಯವನ್ನು ಕಳೆದುಕೊಂಡುಬಿಡುತ್ತಾನೆ. ದೇಶದ ಶೇಕಡಾ 70ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿದ್ದಾರೆ ಮತ್ತು ಅರ್ಧದಷ್ಟು ಜನಸಂಖ್ಯೆ ಬಡವರಾಗಿದ್ದು, ನ್ಯಾಯ ಎಂಬುದು ನಮ್ಮ ದೇಶದಲ್ಲಿ ಮರೀಚಿಕೆಯಾಗಿದೆ.
ನ್ಯಾಯಸೂತ್ರಗಳ ಪ್ರಕಾರ ಕೆಲಸ ಮಾಡಬೇಕಿರುವ ನ್ಯಾಯಾಲಯಗಳು ಸಾಕ್ಷಿ ವ್ಯವಸ್ಥೆಗೆ ಬದ್ಧವಾಗದೇ ಸಿವಿಲ್ ಪ್ರಕರಣಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಬೇಕೆಂದು ನ್ಯಾಯಾಂಗ ವ್ಯವಸ್ಥೆ ಕಟ್ಟುನಿಟ್ಟಾಗಿ ಹೇಳುತ್ತದೆ. ತಮ್ಮ ತಮ್ಮ ವ್ಯಾಪ್ತಿಯೊಳಗೆ ನ್ಯಾಯಾಲಯಗಳನ್ನು ಹೊಂದುವ ವ್ಯವಸ್ಥೆಯ ಮೂಲಕ ಹೈಕೋರ್ಟ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯ ಎಂದು ಕಾನೂನು ಆಯೋಗ 1986ರ ವರದಿಯಲ್ಲಿ ಹೇಳಿದೆ. ದೇಶಾದ್ಯಂತ 50,000 ಘಟಕಗಳಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇ ಆದಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರಿಗೆ ಅದು ನೆಮ್ಮದಿ ತರಲಿದೆ.
ನ್ಯಾಯಾಲಯಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಪ್ರಸಕ್ತ ವಾಸ್ತವಿಕ ದರಗಳ ಆಧಾರದ ಮೇಲೆ ಪರಿಷ್ಕರಿಸಬೇಕು ಹಾಗೂ ಈ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಬೇಕು ಎಂಬ ವಾದವನ್ನು ಸುಪ್ರೀಂ ನ್ಯಾಯ ಮಂಡಳಿ ಎತ್ತಿ ಹಿಡಿದಿದೆ. ನ್ಯಾಯ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಈ ಉದ್ದೇಶ ಸಾಕಾರಕ್ಕಾಗಿ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಸ್ವಾಗತಿಸಬೇಕಾಗಿದೆ.