ಜೈಪುರ: ಜೈಪುರ ಸರಣಿ ಸ್ಫೋಟ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ದ ನ್ಯಾಯಾಧೀಶ ಅಜಯ್ ಕುಮಾರ್ ಶರ್ಮಾ ಇತ್ತೀಚೆಗೆ ಡಿಜಿಪಿ ಭೂಪೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದು, ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹೀಗಾಗಿ ಭದ್ರತಾ ವ್ಯವಸ್ಥೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ನಿವೃತ್ತ ನ್ಯಾಯಾಧೀಶ ಶರ್ಮಾ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ, "ಭಯೋತ್ಪಾದಕ ಗುಂಪುಗಳು ಸೇಡು ತೀರಿಸಿಕೊಳ್ಳಬಹುದು. ಆದರೆ ನನ್ನ ಭದ್ರತೆಯನ್ನು ತೆಗೆದುಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ನನಗೆ ನೀಡಲಾದ ಭದ್ರತೆಯನ್ನು ಮುಂದುವರೆಸಬೇಕೆಂದು ನಾನು ವಿನಂತಿಸುತ್ತೇನೆ" ಎಂದಿದ್ದಾರೆ.
"ಭಯೋತ್ಪಾದಕ ಗುಂಪುಗಳು ಸಾಕಷ್ಟು ಅಪಾಯಕಾರಿ ಮತ್ತು ಏನು ಬೇಕಾದರೂ ಮಾಡಬಹುದು. ಅವರು ನಾನಿರುವ ಪ್ರದೇಶದ ಚಿತ್ರಗಳನ್ನು ಸೆರೆ ಹಿಡಿಯುವುದನ್ನು ಕಂಡಿದ್ದೇನೆ" ಎಂದರು.
1984ರಲ್ಲಿ ಭಯೋತ್ಪಾದಕ ಮಕ್ಬೂಲ್ ಭಟ್ಗೆ ಮರಣ ದಂಡನೆ ವಿಧಿಸಿದ ನ್ಯಾಯಾಧೀಶ ನೀಲಕಂಠ ಗಂಜೂ ಅವರ ಪ್ರಕರಣವನ್ನೂ ಶರ್ಮಾ ಉಲ್ಲೇಖಿಸಿದ್ದಾರೆ. ಅಕ್ಟೋಬರ್ 2, 1989ರಂದು ಭಯೋತ್ಪಾದಕರು ಅವರನ್ನು ಕೊಂದರು. ಈ ಭಯೋತ್ಪಾದಕರು ಐಎಸ್ಐಗೆ ಸೇರಿದವರು.
2008 ಮೇ 13ರಂದು ಜೈಪುರ ಸರಣಿ ಸ್ಫೋಟದ ನೋವನ್ನುಂಡಿದ್ದು, ಈ ಘಟನೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 250 ಮಂದಿ ಗಾಯಗೊಂಡಿದ್ದರು ಎಂದು ಶರ್ಮಾ ಹೇಳಿದ್ದಾರೆ