ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಕೈಗಾರಿಕೆ ಮತ್ತು ಹಲವು ವ್ಯವಹಾರಗಳು ಸ್ಥಗಿತಗೊಂಡಿರುವುದರಿಂದ ಐವರಲ್ಲಿ ಒಬ್ಬ ಭಾರತೀಯ ತನ್ನ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾನೆ ಎಂದು ಹೊಸ ಸಮೀಕ್ಷೆ ತಿಳಿಸಿದೆ.
ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆಯಾದ ಯೂಗೋವ್(YouGov) ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 20 ರಷ್ಟು ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, 16 ರಷ್ಟು ಜನ ವೇತನ ಕಡಿತದ ಭಯದಲ್ಲಿದ್ದಾರೆ. ಶೇಕಡಾ 8 ರಷ್ಟು ಭಾರತೀಯರು ಈ ವರ್ಷ ಬೋನಸ್ ಅಥವಾ ವೇತನ ಏರಿಕೆ ಸಿಗುವುದಿಲ್ಲ ಎಂಬ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿದೆ. ನಗರದಲ್ಲಿ ನಿರುದ್ಯೋಗ ದರವು ಶೇಕಡಾ 30.9ಕ್ಕೆ ಏರಿದ್ದು, ಒಟ್ಟಾರೆ ನಿರುದ್ಯೋಗ ಪ್ರಮಾಣ ಈಗಾಗಲೇ ಶೇಕಡಾ 23.4ಕ್ಕೆ ಏರಿದೆ.
ಸರಿಸುಮಾರು ಮೂರು ವಾರಗಳಿಂದ ಜನರು ಮನೆಯಲ್ಲಿಯೇ ಇರುವುದರಿಂದ, ಯುಗೋವ್‌ನ ಪ್ರಸ್ತುತ ಕೋವಿಡ್-19 ಟ್ರ್ಯಾಕರ್‌ನ ದತ್ತಾಂಶದ ಪ್ರಕಾರ ಜನರಲ್ಲಿ ಭಯದ ಮಟ್ಟವು ಸ್ಥಿರವಾಗಿದೆ ಎಂದು ತೋರಿಸುತ್ತದೆ. ಸೋಂಕಿನಿಂದ ತುಂಬಾ ಅಥವಾ ತಕ್ಕಮಟ್ಟಿಗೆ ಹೆದರುತ್ತಿದ್ದೇವೆ ಎಂದು ಹೇಳುವವರ ಸಂಖ್ಯೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ.
ಸುಮಾರು 47 ರಷ್ಟು ಜನರು ತಮ್ಮನ್ನು ತಾವು ಸದೃಢವಾಗಿಡಲು ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ ಮತ್ತು 46 ರಷ್ಟು ಮಂದಿ, ಸ್ನೇಹಿತರು ಮತ್ತು ಕುಟುಂಬಕ್ಕೆ ವೀಡಿಯೊ ಕರೆಗಳನ್ನು ಮಾಡುತ್ತಿದ್ದಾರೆ.