ಶ್ರೀನಗರ (ಜಮ್ಮು ಕಾಶ್ಮೀರ): ಪಾಪಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ರಜೌರಿ ಜಿಲ್ಲೆಯ ಕೇರಿ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಗುಂಡಿನ ದಾಳಿ ನಡೆಸಿದ್ದು, ಸೇನೆಯ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಹುತಾತ್ಮರಾಗಿದ್ದಾರೆ. ಇದು ಶೆಲ್ ದಾಳಿಯಲ್ಲ, ಪಾಕಿಸ್ತಾನದ ಸ್ನಿಪರ್ಗಳು ನಡೆಸಿದ ದಾಳಿಯಂತಿದೆ ಎಂದು ಸೇನೆ ಹೇಳಿದೆ.
ನೌಶೇರಾ ವಲಯದ ಎಲ್ಒಸಿಯಲ್ಲಿ ಶಂಕಾಸ್ಪದ ಚಲನವಲನ ಭಾರತೀಯ ಸೇನೆಯ ಗಮನಕ್ಕೆ ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಕಡೆಯಿಂದ ಫೈರಿಂಗ್ ಆರಂಭವಾಯಿತು. ಇದು ಸ್ನಿಪರ್ ದಾಳಿಯಂತಿದೆ ಎಂದು ದೇವೇಂದರ್ ಆನಂದ್ ಹೇಳಿದ್ದಾರೆ.
ಪಾಕಿಸ್ತಾನ ಫೈರಿಂಗ್ ಮಾಡಿದ ತಕ್ಷಣ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿತು. ಆದರೆ ಫೈರಿಂಗ್ ವೇಳೆ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದರು. ಕಳೆದ ಎರಡು ದಿನಗಳ ಹಿಂದೆ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಸೇನಾ ಜೆಸಿಒ ರಾಜ್ವಿಂದರ್ ಸಿಂಗ್ ಹುತಾತ್ಮರಾಗಿದ್ದರು.
ಮಧ್ಯರಾತ್ರಿ ಬಹಳ ಹೊತ್ತು ಗುಂಡಿನ ಚಕಮಕಿ ನಡೆದೇ ಇತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ಕುಪ್ವಾರಾ, ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸುತ್ತಲೇ ಇದೆ.
ಕಳೆದ ಮೂರು ತಿಂಗಳಲ್ಲಿ ರಜೌರಿ ಮತ್ತು ಪೂಂಛ್ ವಲಯದಲ್ಲಿ ಪಾಪಿ ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಒಟ್ಟು 9 ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಪಾಕಿಸ್ತಾನ 3,000ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ಮೂರು ವರ್ಷಗಳಲ್ಲಿ 8,571ಕ್ಕೂ ಹೆಚ್ಚು ಸಲ ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.