ಗಿರಿಡಿಹ್: ಜಾರ್ಖಂಡ್ ನ ಒಂದು ಸಣ್ಣ ಹಳ್ಳಿ ಜಮದಾಗ್ ಗ್ರಾಮ. ಅಲ್ಲೊಬ್ಬ ಬಾಲಕಿ ಚಂಪಾ ಬಾಲಕಾರ್ಮಿಕ ಪದ್ಧತಿ ವಿರುದ್ಧ ವಿಶೇಷವಾಗಿ ಹೋರಾಡ್ತಿದ್ದಾಳೆ. ಚಂಪಾ ತುಂಬಾ ಚಿಕ್ಕವಳಾದರೂ ಒಳ್ಳೆಯ ಉದ್ದೇಶಗಳನ್ನ ಹೊಂದಿದ್ದಾಳೆ. ಈ ಪುಟ್ಟ ಹುಡುಗಿ ತನ್ನಂತಹ ಅದೆಷ್ಟೋ ಹುಡುಗಿಯರನ್ನು ತನ್ನ ಪ್ರದೇಶದ ಬಾಲ ಕಾರ್ಮಿಕ ಪದ್ಧತಿಯಿಂದ ಹೊರತರಲು ಪ್ರಯತ್ನಿಸುತ್ತಿದ್ದಾಳೆ.
ಚಂಪಾ ಹಾಡಿನ ಮೂಲಕ, ಹುಡುಗಿಯರ ಜೀವನವನ್ನು ಸಶಕ್ತಗೊಳಿಸುವಂತೆ ತನ್ನ ತಂದೆ ಮತ್ತು ಇತರರ ತಂದೆಯೊಂದಿಗೆ ಮನವಿ ಮಾಡುತ್ತಾಳೆ. ಈ ಪ್ರದೇಶದ ಹುಡುಗಿಯರು ಸಹ ತಮ್ಮ ಕಾರ್ಮಿಕ ಕೆಲಸವನ್ನು ಬಿಟ್ಟು ಶಾಲೆಗಳಿಗೆ ಹೋಗಬೇಕು ಎಂಬುದು ಚಂಪಾಳ ಆಶಯ. ಈ ಹಿಂದೆ ಚಂಪಾ ಸಹ ಬಾಲಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಕೈಲಾಶ್ ಸತ್ಯಾರ್ಥಿ ಫೌಂಡೇಶನ್‌ನ ಸಹಾಯದಿಂದ ಅವಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಹೊರತರಲಾಯಿತು. ನಂತರ ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹವನ್ನು ನಿವಾರಿಸಲು ಈ ಪ್ರದೇಶದಲ್ಲಿ ಚಂಪಾ ಕೆಲಸ ಮಾಡಲು ಪ್ರಾರಂಭಿಸಿದಳು.
ಈ ಮೊದಲು ಚಂಪಾ ತಂದೆ ಮಗಳ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿದ್ದರು. ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಹೋರಾಡದಂತೆ ಕೇಳಿಕೊಳ್ಳುತ್ತಿದ್ದರಂತೆ. ಚಂಪಾಳ ಈ ಹೋರಾಟ ಪರಿಗಣಿಸಿದ ಬ್ರಿಟನ್ ಸರ್ಕಾರ ಅವರಿಗೆ ಡಯಾನಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಚಂಪಾ ಡಯಾನಾ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಚಂಪಾ ಅವರ ತಂದೆ ಕೂಡ ಸಂತೋಷಗೊಂಡರು.
ಚಂಪಾ ಬಾಲ ಕಾರ್ಮಿಕರನ್ನು ಸರಿಯಾದ ಹಾದಿಯಲ್ಲಿ ತರುವುದಲ್ಲದೇ, ಆ ಪ್ರದೇಶದಲ್ಲಿ ಬಾಲ್ಯ ವಿವಾಹಗಳನ್ನು ತಡೆಯುತ್ತಿದ್ದಾರೆ. ಬಡತನದ ಹೊರತಾಗಿಯೂ, ಚಂಪಾ ಅವರ ಧೈರ್ಯ ಕಡಿಮೆಯಾಗಿಲ್ಲ. ಪ್ರತಿಯೊಬ್ಬರೂ ಯಾವಾಗಲೂ ಮಕ್ಕಳ ಜೀವನದಲ್ಲಿ ಸಂತೋಷವನ್ನು ತುಂಬಲು ಪ್ರಯತ್ನಿಸಬೇಕು ಎಂದು ಚಂಪಾ ಹೇಳುತ್ತಾರೆ.