ರಾಂಚಿ: ಜಾರ್ಖಂಡ್ನ 81 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇದರ ಮಧ್ಯೆ ಆಡಳಿತ ಪಕ್ಷ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಭರ್ಜರಿ ಭರವಸೆ ನೀಡಿದೆ.
81 ಕ್ಷೇತ್ರಗಳ ಪೈಕಿ 65 ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ, ಗ್ರಾಮಗಳ ಅಭಿವೃದ್ಧಿ, ಮಹಿಳೆಯರ ಸಶಕ್ತೀಕರಣ ಸೇರಿದಂತೆ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದೆ.
ಇದರ ಜತೆಗೆ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಕೃಷಿ ಆಶೀರ್ವಾದ ಯೋಜನೆ ಅಡಿ ಪ್ರತಿ ವರ್ಷ 5 ಸಾವಿರ ರೂ., ರೈತರಿಗೆ ಮೊಬೈಲ್ ಫೋನ್ ಹಾಗೂ ಬುಡಕಟ್ಟು ಜನಾಂಗದ ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ಪ್ರೋತ್ಸಾಹಧನ ನೀಡುವ ಯೋಜನೆ, ವಿದ್ಯಾರ್ಥಿಗಳಿಗೆ 9-10ನೇ ತರಗತಿ 2,200 ಹಾಗೂ 11-12ನೇ ತರಗತಿ ವಿದ್ಯಾರ್ಥಿಗಳಿಗೆ 7,500 ರೂ. ನಗದು ವಿದ್ಯಾರ್ಥಿ ವೇತನ ನೀಡುವ ಯೋಜನೆ ಘೋಷಣೆ ಮಾಡಿದೆ.
ಜಾರ್ಖಂಡ್ನಲ್ಲಿ ನವೆಂಬರ್ 30, ಡಿಸೆಂಬರ್ 7, ಡಿಸೆಂಬರ್ 12, ಡಿಸೆಂಬರ್ 16 ಹಾಗೂ ಡಿಸೆಂಬರ್ 20ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 23ರಂದು ಫಲಿತಾಂಶ ಹೊರಬರಲಿದೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವೇಳೆ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್, ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಹಾಗೂ ಪ್ರಮುಖ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 2014ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ 37 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ AJSU ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.