ಶ್ರೀನಗರ: ಪುಲ್ವಾಮ ದಾಳಿಯ ನಂತರ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಕಾಶ್ಮೀರದ ಜಮಾತ್ - ಇ- ಇಸ್ಲಾಮಿ(ಜೆಇಎಲ್) ಯನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಸಂಘಟನೆಯ ಆಸ್ತಿಯನ್ನೂ ಜಪ್ತಿ ಮಾಡುತ್ತಿದೆ.
ಕಾಶ್ಮೀರದಾದ್ಯಂತ ಇರುವ ಜೆಇಎಲ್ ಸಂಘಟನೆಯ ಡಜನ್ಗೂ ಹೆಚ್ಚು ಕಾರ್ಯಕರ್ತರು ಹಾಗೂ ನಾಯಕರ ಮನೆಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಂಘಟನೆಯ ಆಸ್ತಿಯನ್ನ ಮುಟ್ಟುಗೋಲು ಹಾಕಲಾಗಿದೆ.
ಗುರುವಾರವಷ್ಟೆ ಜೆಇಎಲ್ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದ ಕೇಂದ್ರದ ಗೃಹ ಇಲಾಖೆ, ಅದರ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದೆ. ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕದಲ್ಲಿರುವ ಜೆಇಎಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಲಾಖೆ ಹೇಳಿದೆ.
ಪುಲ್ವಾಮ ದಾಳಿ ಬೆನ್ನಲ್ಲೆ ಪ್ರತ್ಯೇಕವಾದಿಗಳಿಗೆ ಸರ್ಕಾರ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿರುವ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಇಲ್ಲಿನ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಜೆಇಎಲ್ ಬ್ಯಾನ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.