ನವದೆಹಲಿ : ವಿಶ್ವಸಂಸ್ಥೆಯಲ್ಲಿ ಬಹುಪಕ್ಷೀಯತೆ ಸುಧಾರಿಸಲು ಕ್ರಮ ತೆಗೆದುಕೊಳ್ಳುವ ಅಗತ್ಯತೆಯಿದೆ. ಅಷ್ಟೇ ಅಲ್ಲ, ಅಂತರ್ ಸರ್ಕಾರಿ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಹೇಳಿದರು.
ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ವಿಶ್ವಸಂಸ್ಥೆಗೆ 75 ವರ್ಷವಾಗಿದೆ. ನಾಯಕತ್ವ ವಿಚಾರದಲ್ಲಿ ನಮಗೆ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವಕ್ಕೆ ಸವಾಲಾಗಿದೆ. ಅಷ್ಟೇ ಅಲ್ಲ, ಬಹುಪಕ್ಷೀಯತೆಯನ್ನು ಸುಧಾರಿಸಬೇಕಾಗಿದೆ. ವಿಶ್ವಸಂಸ್ಥೆಯಲ್ಲಿ ರಿಫ್ರೆಶ್ ಬಟನ್ನ ಒತ್ತುವ ಅಗತ್ಯವಿದೆ" ಎಂದರು.
ಯುಎನ್‌ನ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಯುಎನ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ಕೇವಲ ಐದು ಶಾಶ್ವತ ಸದಸ್ಯರನ್ನು ಹೊಂದಿದೆ. ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ವೀಟೋ ಅಧಿಕಾರವನ್ನು ಹೊಂದಿದೆ.
1945ರಲ್ಲಿ ಯುಎನ್ ಸ್ಥಾಪನೆಯಾದ ನಂತರ ಈ ಐದು ರಾಷ್ಟ್ರಗಳಲ್ಲಿ ಅಧಿಕಾರ ಹಂಚಿಕೆಯ ವ್ಯವಸ್ಥೆಯು ಬದಲಾಗದೆ ಉಳಿದಿದೆ. ಭಾರತ, ಜಪಾನ್, ಜರ್ಮನಿ ಮತ್ತು ಬ್ರೆಜಿಲ್ನ ಯುನೈಟೆಡ್ ನೇಶನ್ಸ್ ಸೆಕ್ಯುರಿಟಿ ಕೌನ್ಸಿಲ್ನ ಪ್ರತಿನಿಧಿಯನ್ನಾಗಿ ಮಾಡಲು ಒತ್ತಾಯಿಸಲಾಗುತ್ತಿದೆ.
ಇದೇ ವೇಳೆ ಆರೋಗ್ಯ, ಆಹಾರ ಮತ್ತು ದತ್ತಾಂಶ ಸುರಕ್ಷತೆಯ ಪರಿಕಲ್ಪನೆಗಳನ್ನು ಒಳಗೊಂಡ ರಾಷ್ಟ್ರೀಯ ಭದ್ರತೆ ಮೇಲೆ ಕೋವಿಡ್ -19 ಸಾಂಕ್ರಾಮಿಕ ಬಂದ ಬಳಿಕ ಜಗತ್ತು ಹೇಗೆ ನಂಬಿಕೆಯಿಟ್ಟಿದೆ ಎಂಬುದರ ಬಗ್ಗೆ ಜೈಶಂಕರ್ ಮಾತನಾಡಿದರು.