ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಎನ್ಕೌಂಟರ್ನಲ್ಲಿ ಐಇಡಿ ತಜ್ಞ ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಭಾಯ್ನನ್ನ ಹೊಡೆದುರುಳಿಸಲಾಗಿದೆ.
ಉಗ್ರ ರಿಯಾಜ್ ನಾಯ್ಕು ಹತ್ಯೆ ನಂತರ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರಿಗೆ ಸಿಕ್ಕ ಎರಡನೇ ದೊಡ್ಡ ಯಶಸ್ಸು ಇದಾಗಿದೆ. ಇನ್ನಿಬ್ಬರು ಭಯೋತ್ಪಾದಕರ ಗುರುತು ಪತ್ತೆಯಾಗಿಲ್ಲ ಎಂದು ಕಾಶ್ಮೀರ ಶ್ರೇಣಿಯ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.
ಕಳೆದ ವಾರ ಪುಲ್ವಾಮಾದಲ್ಲಿ ಕಾರಿನಲ್ಲಿ ಐಇಡಿ ಇರಿಸುವಲ್ಲಿ ಅಬ್ದುಲ್ ರೆಹಮಾನ್ ಕೈವಾಡವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಸೇನೆ, ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಇಂದು ಕಾರ್ಯಾಚರಣೆ ನಡೆಸಿವೆ.
ಪಾಕಿಸ್ತಾನದ ಪ್ರಜೆಯಾದ ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಭಾಯ್ ಅಲಿಯಾಸ್ ಫೌಜಿ ಬಾಬಾ ಹತ್ಯೆ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸನ್ನು ನೀಡಿದೆ. ಏಕೆಂದರೆ ಇವನು ಜೈಷ್-ಎ-ಮೊಹಮ್ಮದ್ಗಾಗಿ ಸುಧಾರಿತ ಸ್ಫೋಟಕ ಸಾಧನಗಳನ್ನು ಜೋಡಿಸುವಲ್ಲಿ ಪ್ರವೀಣನಾಗಿದ್ದನು ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.
ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕು ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟ್ರ್ನಲ್ಲಿ ಸಾವಿಗಿಡಾಗಿದ್ದನ್ನು. ಇದಾದ ನಂತರ 'ಫೌಜಿ ಭಾಯ್' ಮತ್ತು ಇತರ ಇಬ್ಬರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ.