ಭೋಪಾಲ್: ಜಲತಜ್ಞ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಅವರು, ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಸದ್ಗುರು ಅಲ್ಲ, ಮೋಸದ ಬಾಬಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭೋಪಾಲ್ನಲ್ಲಿ ನಡೆದ ಜಲ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು, ಕಾವೇರಿ ನದಿ ಉಳಿವಿಗಾಗಿ ಜಗ್ಗಿ ವಾಸುದೇವ್ ಆಯೋಜಿಸಿದ್ದ ಕಾವೇರಿ ಕೂಗು ಕಾರ್ಯಕ್ರಮದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಾಸುದೇವ್ ಅವರು ಕಾವೇರಿ ಕೂಗು ಎಂದು ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳನ್ನು ಸುತ್ತಿದ್ದಾರೆ. ಆದರೆ, ಅಲ್ಲಿನ ಜನರಿಂದ ಸಂಗ್ರಹಿಸಿದ ಮತ್ತು ಹಿಂದಿನ ಸರ್ಕಾರ ನೀಡಿದ ಹಣವನ್ನು ವಾಸುದೇವ್ ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದರು.
ತನ್ನನ್ನು ತಾನು ಸದ್ಗುರು ಎಂದು ಕರೆದುಕೊಳ್ಳುವ ಅವರು, ತನ್ನ ಪತ್ನಿಯನ್ನೇ ಕೊಂದಿದ್ದಾನೆ. ಅಷ್ಟೇ ಅಲ್ಲದೆ, ಕೊಯಮತ್ತೂರಿನಲ್ಲಿ ವಿನೋಬಾ ಭಾವೆ ಅವರು ಭೂಧಾನ್ ಯೋಜನೆಯಡಿ ರೈತರಿಗೆ ನೀಡಿದ್ದ ಭೂಮಿಯನ್ನು ಕಸಿದುಕೊಂಡಿದ್ದಾರೆ. ಅವರು ಸದ್ಗುರು ಅಲ್ಲ, ಮೋಸದ ಬಾಬಾ ಎಂದು ಆರೋಪಿಸಿದರು.
ಈ ಕುರಿತು ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣ ನಡೆಯುತ್ತಿದೆ. ಅಂತಹ ಮೋಸದ ಬಾಬಾ ನದಿಯನ್ನು ಉಳಿಸುವುದು ಸಾಧ್ಯವಿಲ್ಲ. ನೀರಿನ ಸಮಸ್ಯೆ ನೀಗಿಸಲೂ ಸಾಧ್ಯವಿಲ್ಲ. ನದಿಗಳನ್ನು ಪುನಶ್ಚೇತನಗೊಳಿಸಲು ಮಿಸ್ಡ್ ಕಾಲ್ ನೀಡಿ ಎಂದು ಹೇಳಿದ್ದಾರೆ. ಅದರಿಂದ ನದಿಗಳ ಅಭಿವೃದ್ಧಿ ಸಾಧ್ಯವೇ. ಇದು ವಂಚನೆಯ ಒಂದು ಭಾಗ ಅಲ್ಲವೆ? ಎಂದು ಕಿಡಿಕಾರಿದರು.
ಆದರೆ, ಇಶಾ ಫೌಂಡೇಶನ್ ಈ ಹೇಳಿಕೆಗಳನ್ನು ನಿರಾಕರಿಸಿದೆ.