ಶ್ರೀನಗರ: ಭಾರತೀಯ ಯೋಧರ ಮೇಲೆ ಗ್ರೆನೇಡ್ ದಾಳಿ ನಡೆಸಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ಐವರು ಬಿಜೆಪಿ ಕಾರ್ಯಕರ್ತರನ್ನ ರಕ್ಷಣೆ ಮಾಡಿದೆ.
ಇಲ್ಲಿನ ರಾಂಬನ್ ಜಿಲ್ಲೆಯ ಬ್ಯಾಟೊಟೆ ಬಳಿ ಗುಂಡಿನ ದಾಳಿ ನಡೆಯಿತು. ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಬೆಳಗ್ಗೆ ಆರ್ಮಿ ಬಸ್ನಲ್ಲಿ ಯೋಧರು ತೆರಳುತ್ತಿದ್ದ ವೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈ ವೇಳೆ ಗುಂಡಿನ ಕಾಳಗ ಪ್ರಾರಂಭಗೊಳ್ಳುತ್ತಿದ್ದಂತೆ ಮನೆಯೊಂದರಲ್ಲಿ ಅಡಗಿ ಕುಳಿತು, ಮನೆಯಲ್ಲಿದ್ದ ಐವರು ಬಿಜೆಪಿ ಕಾರ್ಯಕರ್ತರನ್ನ ಉಗ್ರರು ಸೆರೆಯಾಗಿಟ್ಟುಕೊಂಡಿದ್ದರು. ತಕ್ಷಣವೇ ಭಾರತೀಯ ಯೋಧರು ಮನೆ ಸುತ್ತುವರೆದು, ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನ ಹೊಡೆದುರುಳಿಸಿದ್ದಾರೆ. ಅಲ್ಲದೆ ಅವರ ವಶದಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ಧುಗೊಳಿಸಿದ ಬಳಿಕ ಮೇಲಿಂದ ಮೇಲೆ ಕಣಿವೆ ರಾಜ್ಯದಲ್ಲಿ ಉಗ್ರರು ದಾಳಿ ನಡೆಸುತ್ತಿದ್ದು, ನಿನ್ನೆಯಷ್ಟೇ ಭಾರತೀಯ ಸೇನೆ ಗಡಿಯೊಳಗೆ ಉಗ್ರರು ನುಸುಳುತ್ತಿದ್ದ ವಿಡಿಯೋ ರಿಲೀಸ್ ಮಾಡಿತ್ತು. ಅದಕ್ಕೂ ಮುಂಚಿತವಾಗಿ ಪಾಕ್ ಬಾರ್ಡರ್ ಆ್ಯಕ್ಷನ್ ಟೀಂನ 7 ಸದಸ್ಯರನ್ನು ಹೊಡೆದುರುಳಿಸಿ, ಮೃತದೇಹ ತೆಗೆದುಕೊಂಡು ಹೋಗುವಂತೆ ಭಾರತೀಯ ಸೇನೆ ಹೇಳಿತ್ತು.