ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ನೂರಾರು ಭಯೋತ್ಪಾದಕರು ಸಕ್ರಿಯರಾಗಿದ್ದಾರೆಂಬ ಬೆಚ್ಚಿ ಬೀಳಿಸುವ ಸುದ್ದಿಯೊಂದು ಇದೀಗ ವಿಶ್ವಸಂಸ್ಥೆಯಿಂದ ಬಹಿರಂಗಗೊಂಡಿದೆ.
ವಿಶ್ವಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿರುವ ಪ್ರಕಾರ, 150ರಿಂದ 200 ಆಲ್ಖೈದಾ, ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದು, ದಾಳಿ ನಡೆಸಲು ದೊಡ್ಡ ಮಟ್ಟದ ಸ್ಕೆಚ್ ಹಾಕುತ್ತಿದ್ದಾರೆ ಎಂದು ತಿಳಿಸಿದೆ. ಬಾಂಗ್ಲಾದೇಶ, ಮಯನ್ಮಾರ್, ಪಾಕಿಸ್ತಾನ ಹಾಗೂ ಭಾರತದ ಕೆಲವರು ಸೇರಿದಂತೆ 150 ರಿಂದ 200 ಐಸಿಸ್ ಉಗ್ರರು ಇದರಲ್ಲಿ ಭಾಗಿಯಾಗಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆ ಜತೆ ಕೈಜೋಡಿಸಿರುವ ಅಲ್ಖೈದಾ ಕೂಡ ಇದರಲ್ಲಿ ಶಾಮೀಲು ಆಗಿದೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ ಭಯೋತ್ಪಾದಕರು ಹೆಚ್ಚು ಸಕ್ರಿಯರಾಗಿದ್ದು, ಭಾರತದಲ್ಲಿನ ಅಲ್ ಖೈದ್ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಮಹಮ್ಮೂದ್ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ವರದಿಯಾಗಿದೆ. 2019ರಲ್ಲಿ ಭಾರತದಲ್ಲಿ ಐಎಸ್ಐಎಸ್ಎಲ್(ಇಂಡಿಯನ್ ಅಫಿಲಿಯೇಟ್) ಸಕ್ರಿಯವಾಗಿದ್ದು, ಇದರಲ್ಲಿ ಅನೇಕ ಉಗ್ರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಬಹಿರಂಗವಾಗಿದೆ.