ಮುಂಬೈ: ಚಾಮರಾಜನಗರದ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ದುರಂತದಿಂದ ಪ್ರೇರಣೆ ಪಡೆದ ಐಸಿಸ್ ಉಗ್ರರು, ಅದೇ ರೀತಿ ಸ್ಕೆಚ್ ಹಾಕಿ 40 ಸಾವಿರ ಮಂದಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಉಗ್ರರು ನಡೆಸಿದ್ದ ಈ ಯತ್ನ ವಿಫಲವಾಗಿದೆ. ಅಂದಹಾಗೆ ವಿಷ ಹಾಕಲು ಪ್ಲಾನ್ ಮಾಡಿದ್ದ ಶಂಕಿತ 10 ಐಸಿಸ್ ಉಗ್ರರನ್ನು ಮುಂಬೈನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ವಿಷ ಪ್ರಸಾದ ಸ್ಕೆಚ್ ವಿಷಯ ಬಾಯ್ಬಿಟ್ಟಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಮುಂಬೈನ ಮುಂಬ್ರೇಶ್ವರ ದೇವಸ್ಥಾನದಲ್ಲಿ ನಡೆದ ಹಬ್ಬ ಆಚರಣೆ ವೇಳೆ ಪ್ರಸಾದದಲ್ಲಿ ವಿಷಯ ಹಾಕಲು ಯತ್ನಿಸಿದ್ದ ಉಗ್ರರು, ಪ್ರವಾಸಿಗರು, ವಿದೇಶಿಗರು ಸೇರಿ 40 ಸಾವಿರ ಮಂದಿಯನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳ ತಂಡ ಶಂಕಿತ ಉಗ್ರ ತಲಾಹ್ ಪೋಟ್ರಿಕ್ನನ್ನು ಜನವರಿ .28ರಂದು ದೇವಸ್ಥಾನದ ಅಡುಗೆ ಕೋಣೆಗೆ ಕರೆದೊಯ್ದಿದ್ದರು. ಪ್ರಸಾದದಲ್ಲಿ ಯಾವ ರೀತಿ ವಿಷ ಹಾಕಬೇಕೆಂದು ಯೋಜನೆ ರೂಪಿಸಿದ್ದೆವು ಎಂಬುದನ್ನು ಆತ ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾನೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಸ್ಕೆಚ್ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಶಿವರಾತ್ರಿ ದಿನದಂದು ಮತ್ತೆ ಪ್ರಸಾದಕ್ಕೆ ವಿಷ ಬೆರೆಸಲು ಸ್ಕೆಚ್ ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ಶಂಕಿತ ಉಗ್ರರು ರಾಸಾಯನಿಕ ಬಳಸಿ ವಿಷ ತಯಾರಿಸಲೂ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.ವಾಟ್ಸ್ಆ್ಯಪ್ನಲ್ಲಿ ಗ್ರೂಪ್ ಮಾಡಿಕೊಂಡಿದ್ದ ಈ ಹತ್ತು ಮಂದಿ ಯಾವ್ಯಾವ ರೀತಿ ದಾಳಿಗಳನ್ನು ನಡೆಸಬೇಕು ಎಂಬ ಬಗ್ಗೆ ಚರ್ಚಿಸಿದ್ದರು. ಬೃಹನ್ಮುಂಬೈ ಸಾರ್ವಜನಿಕ ಆಸ್ಪತ್ರೆಯ ಔಷಧಗಳಿಗೆ ವಿಷ ಹಾಕಲೂ ಇವರು ಸ್ಕೆಚ್ ಹಾಕಿದ್ದರು. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಿಗೂ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಈ ಶಂಕಿತ ಉಗ್ರರ ತಂಡ ಡ್ಯಾಂ ನೀರಿಗೆ ರಾಸಾಯನಿಕ ವಿಷ ಬೆರೆಸಿ ಸಾಮೂಹಿಕ ಮಾರಣಹೋಮ ನಡೆಸಲೂ ಯೋಜನೆ ಹಾಕಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.