ಹೈದರಾಬಾದ್: ನೇಪಾಳ ಖಡಾಖಂಡಿತವಾಗಿ ಭಾರತದಿಂದ ದೂರ ಸರಿಯುತ್ತಿದೆ. ತನ್ನ ಕುರ್ಚಿ ಅಲುಗಿಸಲು ಭಾರತ ಯತ್ನಿಸುತ್ತಿದೆ ಎಂದು ನೇಪಾಳದ ಪ್ರಧಾನಿ ಕೆ. ಪಿ. ಓಲಿ ಆರೋಪ ಮಾಡಿದ್ದಾರೆ. ಉತ್ತರಾಖಂಡದ ಪಿತೋರಘಡ ಜಿಲ್ಲೆಗೆ ಸೇರಿದ 400 ಚದರ ಕಿ.ಮೀ ವ್ಯಾಪ್ತಿಯ ಭೂಭಾಗವನ್ನು ಒಳಗೊಂಡ ಹೊಸ ನೇಪಾಳಿ ನಕ್ಷೆ ರಚಿಸಲಾಯಿತು. ಅದಕ್ಕೆ ಪ್ರತಿಯಾಗಿ ಭಾರತ ಪದಚ್ಯುತಿಗೆ ಯತ್ನಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಓಲಿಯವರ ಕ್ರಮಕ್ಕೆ ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಕ್ಷದ ಹಿರಿಯ ನಾಯಕರಾದ ಪುಷ್ಪಾ ಕಮಲ್ ದಹಲ್ ‘ಪ್ರಚಂಡ’, ಮಾಧವ್ ಕುಮಾರ್ ನೇಪಾಳ್ ಹಾಗೂ ಝಾಲ್ ನಾಥ್ ಖನಾಲ್ ಅವರು ಈ ನಿರ್ಧಾರದ ಕುರಿತು ಅಸಮಧಾನ ಹೊರಹಾಕಿದ್ದಾರೆ. ಭಾರತದ ವಿರುದ್ಧ ಓಲಿ ಮಾಡುತ್ತಿರುವ ಆರೋಪಕ್ಕೆ ಬೆಂಬಲ ಸೂಚಿಸಲು ನಂಬಲರ್ಹ ಸಾಕ್ಷ್ಯಗಳೇನಾದರೂ ಇವೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಯತ್ನದಲ್ಲಿ ವಿಫಲವಾದರೆ ಓಲಿ ಅವರು ಪ್ರಧಾನಿ ಮತ್ತು ಪಕ್ಷದ ಸಹ-ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸ್ಥಿತಿ ಉದ್ಭವಿಸುತ್ತದೆ.
ಇದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಆಂತರ್ಯದೊಳಗೆ ನಡೆಯುತ್ತಿರುವ ಅಧಿಕಾರಕ್ಕಾಗಿನ ಬೇಗುದಿಯಾಗಿ ತೋರುತ್ತಿದೆ. ಮತ್ತೊಂದೆಡೆ ಭಾರತ ಮತ್ತು ಇತರ ದೇಶಗಳ ಜೊತೆಗಿನ ನೇಪಾಳದ ನಿಕಟ ಸಂಬಂಧವನ್ನು ಕೂಡ ತೆರೆದಿಡುತ್ತಿದೆ. ಹಿರಿಯ ಸಹವರ್ತಿಗಳಿದ್ದರೂ ಕೂಡ ಪ್ರಧಾನಿ ಹುದ್ದೆ ಓಲಿ ಅವರಿಗೆ ಓಲಿದಿದ್ದು ಸಮಸ್ಯೆ ಉದ್ಭವಿಸಲು ಕಾರಣ ಎನ್ನಲಾಗುತ್ತಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಹ ಸಂದರ್ಭದಲ್ಲಿ ಕೂಡ ಓಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪಕ್ಷದ ಮತ್ತೊಬ್ಬ ಸಹ- ಅಧ್ಯಕ್ಷ ಪ್ರಚಂಡ ಹೇಳಿದ್ದಾರೆ. ಪಕ್ಷದ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವ ಮಾಧವ್ ನೇಪಾಳ್ ಅವರನ್ನು ಗಣನೆಗೆ ತೆಗೆದುಕೊಳ್ಳದೆ ಚೀನಾದ ಕಮ್ಯುನಿಸ್ಟ್ ಪಾರ್ಟಿ ಜೊತೆ ಕಳೆದ ತಿಂಗಳು ಪಕ್ಷದ ಮಟ್ಟದ ಸಂವಾದವನ್ನು ಆಯೋಜಿಸಲಾಗಿತ್ತು.
ಓಲಿ ಅವರು ಶಿಷ್ಟಾಚಾರಗಳಿಗೆ ವಿರುದ್ಧವಾಗಿ ಪಕ್ಷದ ಎರಡು ಪ್ರಮುಖ ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಬಹುತೇಕ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳನ್ನು ನೇರವಾಗಿ ಅಥವಾ ಅವರ ಅನುಯಾಯಿಗಳ ಮೂಲಕ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕೋವಿಡ್- 19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿ, ಭ್ರಷ್ಟಾಚಾರ ಹತ್ತಿಕ್ಕುವಲ್ಲಿ ಅಥವಾ ಪ್ರಗತಿಯ ಭರವಸೆಗಳನ್ನು ನೀಡುವಲ್ಲಿ ಓಲಿ ಆಡಳಿತದ ಲೆಕ್ಕ ತಪ್ಪಿದೆ. ಪರಿಣಾಮ ಸರ್ಕಾರ ಮತ್ತು ಪಕ್ಷ ಜನರ ಒಲವನ್ನು ಕಳೆದುಕೊಳ್ಳುತ್ತಿದೆ. ಭವಿಷ್ಯದಲ್ಲಿಯೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಎದುರಾಗಬಹುದು ಎಂಬ ಆತಂಕ ಇದೆ. ಎಂ ಸಿ ಸಿ ಕಾರ್ಯಕ್ರಮದಡಿ ನೇಪಾಳಕ್ಕೆ 500 ದಶಲಕ್ಷ ಅಮೆರಿಕನ್ ಡಾಲರ್ ಧನಸಹಾಯ ಹರಿದುಬರುವುದಕ್ಕೆ ಓಲಿ ಅವರ ವಿರೋಧ ಇತ್ತು.
ಪ್ರತಿಪಕ್ಷದ ನಾಯಕರನ್ನು ಬೆಳೆಸುವ ಮೂಲಕ, ಚೀನಾದ ಬೆಂಬಲ ಪಡೆಯುವ ಮೂಲಕ ಹಾಗೂ ಭಾರತ ವಿರೋಧಿ ರಾಷ್ಟ್ರೀಯತೆ ಹುಟ್ಟುಹಾಕುವ ಮೂಲಕ ಪಕ್ಷದಲ್ಲಿ ತಾನು ಏಕಾಂಗಿ ಎಂಬ ಅಸಮತೋಲನವನ್ನು ಸರಿದೂಗಿಸಲು ಅವರು ಯತ್ನಿಸುತ್ತಿದ್ದಾರೆ. ಹೀಗೆ ಅವರು ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. 2015 ರಲ್ಲಿ ಹೊಸ ಸಂವಿಧಾನದ ಕರಡು ರೂಪಿಸುವ ಸಮಯದಲ್ಲಿ, 2017 ರಲ್ಲಿ ನಡೆದ ಸಂಸತ್ ಚುನಾವಣೆಯ ಸಮಯದಲ್ಲಿ ಮತ್ತು ಈಗ ನಕ್ಷೆಯ ವಿಚಾರದಲ್ಲಿ ಓಲಿ ನಡೆ ಇದೇ ತೆರನಾಗಿದೆ.
ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವೋಬ ಅವರ ಮೌನ ಬೆಂಬಲ ಅವರಿಗೆ ಇದೆ ಎಂಬ ಮಾತುಗಳಿವೆ. ಹೊಸ ನಕ್ಷೆ ರಚನೆಯ ಮೂಲಕ ಓಲಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಉರುಳಿಸಿದಂತಾಗಿದೆ. ಭಾರತ ವಿರೋಧಿ ನೇಪಾಳಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಮತ್ತು ಬಲವಾದ ರಾಷ್ಟ್ರೀಯತಾವಾದಿ ನಾಯಕನಾಗಿ ಹೊರಹೊಮ್ಮಲು ಹಾಗೂ ತಮ್ಮ ಪಕ್ಷದ ಒಳಗೆ ಮತ್ತು ಹೊರಗೆ ಇರುವ ಅವರ ಟೀಕಾಕಾರರ ಬಾಯಿ ಮುಚ್ಚಿಸಲು ಈ ಪ್ರಕರಣವನ್ನು ಬಳಸಿಕೊಳ್ಳಲಾಗಿದೆ.
ತನ್ನ ಸಂಕುಚಿತವಾದ ವೈಯಕ್ತಿಕ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ನೇಪಾಳಿ ರಾಷ್ಟ್ರೀಯತೆಯನ್ನು ಜಾಣ್ಮೆಯಿಂದ ಅವರು ಬಳಸಿಕೊಳ್ಳುತ್ತಿದ್ದಾರೆ. ಇದು ಓಲಿ ಅವರಿಗೆ ಮೂರು ಕಾರಣಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಮೊದಲಿಗೆ, ಹೊಸ ನೇಪಾಳವೊಂದು ಉದಯಿಸಿದ್ದು ಅದು ಯುವ ಮನಸ್ಸು, ಮಹತ್ವಾಕಾಂಕ್ಷೆ, ಆತ್ಮವಿಶ್ವಾಸದಿಂದ ಕೂಡಿದೆ. ಜೊತೆಗೆ ತನ್ನ ಅಸ್ಮಿತೆಯ ಬಗ್ಗೆ ಜಾಗೃತವಾಗಿರುವುದನ್ನು ಒಪ್ಪಲೇ ಬೇಕಿದೆ. ದೇಶದ ಶೇ 65% ಕ್ಕಿಂತ ಹೆಚ್ಚು ಜನಸಮುದಾಯ ನೇಪಾಳಿ ಯುವಜನತೆಯಿಂದ ಕೂಡಿದೆ.
ಅದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಬಲ ಪಡೆದಿದೆ, ಜೊತೆಗೆ ಇಂಟರ್ನೆಟ್ ಮತ್ತು ವಲಸೆ ( ಕೆಲಸಕ್ಕಾಗಿ ) ಮೂಲಕ ಜಗತ್ತಿಗೆ ದೊಡ್ಡ ಪ್ರಮಾಣದಲ್ಲಿ ತೆರೆದುಕೊಂಡಿದೆ, ವಿದ್ಯೆ, ನಿಪುಣತೆ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಸಮುದಾಯ ಇದು. ಈಗಾಗಲೇ ಕ್ಲೀಷೆ ಎನಿಸಿರುವ ಭಾರತದೊಟ್ಟಿಗಿನ ರೋಟಿ- ಬೇಟಿ ಎಂಬಂತಹ ಸಾಂಸ್ಕೃತಿಕ- ನಾಗರಿಕ ಸಂಬಂಧದಿಂದ ಇದು ಪ್ರಭಾವಿತವಾಗಿಲ್ಲ. ಬದಲಿಗೆ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬಲ್ಲ ಮತ್ತು ಆರಾಮದಾಯಕ ಜೀವನ ನಡೆಸಲು ಸಹಾಯ ಮಾಡಬಲ್ಲ ಭಾರತವನ್ನು ಇದಿರು ನೋಡುತ್ತಿದೆ. ಭಾರತವು ಆ ಲೆಕ್ಕಾಚಾರದಲ್ಲಿ ಎಡವಿ ಬಿದ್ದಿದೆ ಎಂಬ ಗ್ರಹಿಕೆ ಇದೆ.
ಎರಡನೇ ಅಂಶ ಹೀಗಿದೆ: ಕಳೆದ ಹಲವು ವರ್ಷಗಳಿಂದ ಭಾರತ ನೇಪಾಳದಲ್ಲಿ ದೃಗ್ಗೋಚ್ಚರವಾಗುವಂತಹ ದೊಡ್ಡ ಕೆಲಸಗಳನ್ನೇನೂ ಮಾಡಿರಲಿಲ್ಲ. ಯುವಜನರನ್ನು ಭಾರಿ ಪ್ರಮಾಣದಲ್ಲಿ ಸೆಳೆಯುವಂತಹ ಯಾವುದೇ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನೂ ಕೈಗೊಳ್ಳಲಿಲ್ಲ. ನಿರ್ಲಕ್ಷ್ಯದ, ಅಸಡ್ಡೆಯ, ಸೊಕ್ಕಿನ ಹಾಗೂ ದಬ್ಬಾಳಿಕೆಯ ರಾಜತಾಂತ್ರಿಕತೆ ಮೂಲಕ ನೇಪಾಳದ ಆಂತರಿಕ ವ್ಯವಹಾರಗಳನ್ನು ಆಳದಲ್ಲಿ ನಿರ್ವಹಿಸಲು ಯತ್ನಿಸುವ ದೇಶವಾಗಿ ಭಾರತ ಕಂಡುಬರುತ್ತಿದೆ. ಸೆಪ್ಟೆಂಬರ್ 2015ರಲ್ಲಿ ನೇಪಾಳದ ಸಂವಿಧಾನ ರಚನಾ ಪ್ರಕ್ರಿಯೆ ಸಂದರ್ಭದಲ್ಲಿ ಐದು ತಿಂಗಳ ಕಾಲ ಆರ್ಥಿಕ ದಿಗ್ಬಂಧನ ವಿಧಿಸುವ ಮೂಲಕ ಭಾರತ ಒರಟಾಗಿ ಮೂಗು ತೂರಿಸಿತು. ಇದರಿಂದಾಗಿ, ಜನಸಮಾನ್ಯರ ಬದುಕು ನುಚ್ಚುನೂರಾಯಿತು.
ಇವೆಲ್ಲವೂ ನೇಪಾಳದ ವಿಚಾರವಾಗಿ ಭಾರತದ ಇತ್ತೀಚಿನ ವರ್ತನೆಗಳೇ ಆಗಿವೆ. ಈ ರಾಜತಾಂತ್ರಿಕ ಪ್ರಮಾದಗಳು ನೇಪಾಳದ ಸಾಮಾನ್ಯ ಜನರನ್ನು ಭಾರತದಿಂದ ದೂರ ಉಳಿಯುವಂತೆ ಮಾಡಿವೆ. 2015 ರಿಂದಲೂ ನೇಪಾಳದ ಕಮ್ಯುನಿಸ್ಟ್ ಪಕ್ಷ ಮತ್ತು ಪ್ರಧಾನಿ ಓಲಿ ಅವರ ನಾಯಕತ್ವಕ್ಕೆ ಭಾರತದ ಬೆಂಬಲ ದೊರೆಯಲಿಲ್ಲ. ಆದರೆ ನೇಪಾಳದಿಂದ ಬಲವಾದ ಪ್ರತಿರೋಧ ವ್ಯಕ್ತ ಆಗುತ್ತಿದ್ದಂತೆ ಭಾರತ ಅಲ್ಲಿನ ಆಡಳಿತದ ಕುರಿತು ಮೆದು ಧೋರಣೆ ಅನುಸರಿಸಲಾರಂಭಿಸಿತು. ರಸ್ತೆ, ರೈಲು ಸಂಪರ್ಕಗಳು ಹಾಗೂ ತೈಲ ಪೈಪ್‌ಲೈನ್ ಸೇರಿದಂತೆ ಬಾಕಿ ಇರುವ ಅನೇಕ ಯೋಜನೆಗಳನ್ನು ತ್ವರಿತಗೊಳಿಸಲು ಇದು ಪ್ರಯತ್ನಿಸಿತು, ಆದರೆ ಇದು ಅಲ್ಲಿನ ಆಡಳಿತದ ಮೇಲೆ ಅಥವಾ ಭಾರತ ವಿರೋಧಿ ನೇಪಾಳಿ ರಾಷ್ಟ್ರೀಯತೆಯ ದೃಷ್ಟಿಕೋನದ ಮೇಲೆ ದೊಡ್ಡ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.
ಭಾರತ ಬೆಳೆಸಿದ ನೇಪಾಳಿ ಪರಕೀಯತೆಯನ್ನು ಚೀನಾ ಸಂಪೂರ್ಣವಾಗಿ ಬಳಸಿಕೊಂಡಿತು. ಚೀನಾದ ಬಂದರುಗಳ ಮುಖಾಂತರ ನೇಪಾಳಕ್ಕೆ ಪರ್ಯಾಯ ವ್ಯಾಪಾರ ಸಾರಿಗೆ ಮಾರ್ಗ ದಕ್ಕಿತು. ಬೆಲ್ಟ್ ಮತ್ತು ರೋಡ್ ಯೋಜನೆ (ಬಿಆರ್ಐ) ಮುಖೇನ ನೇಪಾಳಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿತು. ಚೀನಾ ತನ್ನ ಸಮೃದ್ಧ ಸಂಪನ್ಮೂಲಗಳ ಮೂಲಕ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಗಣ್ಯರಿಗೆ ಆಮಿಷವನ್ನೂ ಒಡ್ಡಿತು, ಇದರಿಂದ ನೇಪಾಳದಲ್ಲಿ ರಾಜಕೀಯ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ದೊರೆತಂತಾಯಿತು.
ನೇಪಾಳದಲ್ಲಿನ ಚೀನಾದ ರಾಯಭಾರಿ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಿರುವುದು, ಓಲಿ ಸರ್ಕಾರವನ್ನು ಸ್ಥಿರವಾಗಿ ಇಡಲು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸಿರುವುದು ಮಾಧ್ಯಮಗಳಲ್ಲಿ ವರದಿ ಆಗಿದೆ. 1954 ಮತ್ತು 2015 ರಲ್ಲಿ ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ಭಾರತ ಮತ್ತು ಚೀನಾ ನಡುವಿನ ಸಂಪರ್ಕ ಕೇಂದ್ರವಾಗಿ ಲಿಪುಲೇಕ್ ಅನ್ನು ಗುರುತಿಸಲಾಗಿದೆ. ಹೀಗಾಗಿ ನೇಪಾಳದ ಕಲಾಪಾನಿ ಹಕ್ಕುಗಳು ಮತ್ತು ಹೊಸ ನಕ್ಷೆಯ ಪ್ರಕರಣವನ್ನು ಚೀನಾಗೆ ಬಹಿರಂಗವಾಗಿ ಬೆಂಬಲಿಸಲು ಸಾಧ್ಯವಿಲ್ಲ. ಆದರೂ, ನೇಪಾಳದ ಪ್ರತಿಪಾದನೆ ಚೀನಾದ ಹಿತಾಸಕ್ತಿಗಳಿಗೆ ಪೂರಕವಾಗಿದೆ ಮತ್ತು ಭಾರತ- ನೇಪಾಳದ ಭಿನ್ನಮತ ನೇಪಾಳದಲ್ಲಿ ಚೀನಾದ ಆರ್ಥಿಕ ಮತ್ತು ಕಾರ್ಯತಂತ್ರದ ಬಲವರ್ಧನೆಗೆ ಅನುಕೂಲಕರವಾಗಿ ಪರಿಣಮಿಸಿದೆ.
ಬಲವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಬಾಂಧವ್ಯಗಳ ಹೊರತಾಗಿಯೂ ನೇಪಾಳದಲ್ಲಿ ಚೀನಾದ ಪ್ರಭಾವ ಹತ್ತಿಕ್ಕುವುದು ಭಾರತಕ್ಕೆ ಹೆಚ್ಚು ಕಷ್ಟಕರವಾಗಬಹುದು. ಭಾರತಕ್ಕೆ ಈಗ ಅಗತ್ಯವಾಗಿರುವುದು ನೇಪಾಳ ಕುರಿತಂತೆ ಅದು ಇಟ್ಟ ಹೆಜ್ಜೆಗಳ ಅವಲೋಕನ ಮತ್ತು ಹಿಮಾಲಯದ ನೆರೆಹೊರೆಯ ದೇಶಗಳ ಜೊತೆಗಿನ ರಾಜತಾಂತ್ರಿಕತೆಯ ಮರುಹೊಂದಾಣಿಕೆ. ಹಿಮಾಲಯದ ಸುತ್ತಲಿನ ದೇಶಗಳೊಂದಿಗೆ ಭಾರತ ಸ್ನೇಹಹಸ್ತ ಚಾಚುವುದಕ್ಕೆ ಚೀನಾ ಅಡ್ಡಗಾಲು ಹಾಕುತ್ತಲೇ ಇರುವುದು ಇತಿಹಾಸದಲ್ಲಿ ದಾಖಲಾಗಿದೆ.