ಪರಿಸರಸ್ನೇಹಿ ಸಾರಿಗೆಯ ಕೆಳಮಟ್ಟದ ಸಮಸ್ಯೆಗಳು
ನಮ್ಮ ರಸ್ತೆಗಳ ಮೇಲೆ ಎಲೆಕ್ಟ್ರಿಕ್ ವಾಹನಗಳು (ಇವಿ) ಸಲೀಸಾಗಿ ಓಡಾಡಲು ಆರಂಭಿಸಿದ ಕೂಡಲೇ, ದೇಶದೆಲ್ಲೆಡೆ ಸಾಕಷ್ಟು ಬದಲಾವಣೆಗಳಾಗಬಹುದು. ಶಬ್ದ ಮಾಲಿನ್ಯ ನಿಯಂತ್ರಣ, ಶೂನ್ಯಮಟ್ಟಕ್ಕಿಳಿಯಲಿರುವ ವಾಯುಮಾಲಿನ್ಯ, ಹಾಗೂ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕಡಿಮೆ ಆಮದು, ಅವುಗಳಲ್ಲಿ ಕೆಲವು ಕೇಂದ್ರ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯನ್ನು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದರೆ ಭವಿಷ್ಯದಲ್ಲಿ ಇವು ಸಾಕಾರಗೊಳ್ಳಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಚೀನಾದಂತೆಯೇ ಭಾರತ ಎಲೆಕ್ಟ್ರಿಕ್ ವಾಹನಗಳ ತಾಣವಾಗಲಿದೆ. ಆದರೆ ಚೀನಾ ಕೇವಲ ವಾಹನ ಮಾತ್ರವಲ್ಲದೆ, ವಿವಿಧ ರೀತಿಯ ಪರಿಸರ ಸ್ನೇಹಿ- ಇಂಧನ ಉತ್ಪನ್ನಗಳನ್ನು ಕೂಡ ತಯಾರಿಸುತ್ತದೆ. ಈಗ ನಮ್ಮೆಲ್ಲರ ಮನಸ್ಸಿನಲ್ಲಿ ಮೊಳಕೆಯೊಡೆಯುವ ಏಕೈಕ ಪ್ರಶ್ನೆ ಎಂದರೆ ಅಂತಹ ಕಾಲ ಯಾವಾಗ ನಮ್ಮ ದೇಶದಲ್ಲಿ ಬರಲಿದೆ ಎಂಬುದು.
ಮೂಲ ಸೌಕರ್ಯ ಕೊರತೆ
ಕಳೆದ ಬೇಸಿಗೆಯಲ್ಲಿ ಹ್ಯುಂಡೈ ಮೋಟಾರ್ ಕಾರ್ಪೊರೇಷನ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ), ‘ಹ್ಯುಂಡೈ ಕೋನಾ’ವನ್ನು ಭಾರತದಲ್ಲಿ ಅನಾವರಣಗೊಳಿಸಿತು. ಅದಾಗಿ ಕೆಲವು ತಿಂಗಳುಗಳ ಬಳಿಕವೂ ವಾಹನದ ಸೂಕ್ತ ಬಳಕೆ ಸಾಧ್ಯವಾಗಿಲ್ಲ. ಎಲೆಕ್ಟ್ರಿಕ್ ಎಸ್ ಯು ವಿ ಎಂದು ಪರಿಚಯಗೊಂಡ ‘ಕೋನಾ’ ಸರಣಿಯ ವಾಹನಗಳು ಆಗಸ್ಟ್ ವರೆಗೆ ಕೇವಲ 130ರಷ್ಟು ಮಾರಾಟವಾದವು. ಸರ್ಕಾರದಿಂದ ಸಹಕಾರ ದೊರೆತರೂ ಮಾರಾಟ ಹೆಚ್ಚಿಲ್ಲ. ಸಾಮಾನ್ಯ ಭಾರತೀಯರ ಸರಾಸರಿ ಆದಾಯ ರೂ. 1.45 ಲಕ್ಷ. ಆದರೆ ಕಂಪೆನಿ ಈ ವಾಹನದ ಆರಂಭಿಕ ಬೆಲೆಯನ್ನು 25 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿಡಲು ಮಾತ್ರ ಸಾಧ್ಯವಾಯಿತು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಪ್ರಚಾರಗೊಳ್ಳದೇ ಇರಲು ಅನೇಕ ಕಾರಣಗಳಿದ್ದು, ಅವುಗಳಲ್ಲಿ ಪ್ರಮುಖವಾದವು: ಈ ಬಗೆಯ ವಾಹನಗಳನ್ನು ಚಾರ್ಜ್ ಮಾಡಲು ಸೂಕ್ತ ಮೂಲಸೌಕರ್ಯ ಇಲ್ಲದಿರುವುದು, ಅಂತಹ ವಾಹನಗಳ ಖರೀದಿಗೆ ಬ್ಯಾಂಕುಗಳು ಹಣಕಾಸಿನ ನೆರವು ನೀಡಲು ಹಿಂದು- ಮುಂದು ನೋಡುವುದು. ವಾಹನಗಳ ಬಳಕೆ ವೇಳೆ ಸರ್ಕಾರಿ ಇಲಾಖೆಗಳಲ್ಲಿ ಉಂಟಾಗಬಹುದಾದ ನಿರಾಕರಣೆಯಂತಹ ಸಮಸ್ಯೆಗಳು ಸೇರಿಕೊಂಡಿವೆ. ಕಳೆದ ಆರು ವರ್ಷಗಳಲ್ಲಿ ಸ್ಥಳೀಯವಾಗಿ 8000 ವಿದ್ಯುತ್ ಚಾಲಿತ ವಾಹನಗಳು ಮಾತ್ರ ಮಾರಾಟವಾಗಿವೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇದಕ್ಕಿಂತಲೂ ಹೆಚ್ಚಿನ ವಾಹನಗಳನ್ನು ಕೇವಲ 2 ದಿನಗಳಲ್ಲಿ ಮಾರಾಟ ಮಾಡುವುದಾಗಿ ಚೀನಾ ಹೇಳಿಕೊಂಡಿದೆ. ಭಾರತದಲ್ಲಿ ಎಲ್ಲಾ ಸಮುದಾಯಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಶಕ್ತಿ ಇರುವುದಿಲ್ಲ. ಮುಂದಿನ ಎರಡು, ಮೂರು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆ ಸರ್ಕಾರಕ್ಕಾಗಲೀ ಅಥವಾ ಕಂಪೆನಿಗಳಿಗಾಗಲೀ ಇಲ್ಲ. ಹಸಿರು ವಾಹನ ಬಳಕೆಯ ಆಂದೋಲನವನ್ನು ಸರ್ಕಾರ ಆರಂಭಿಸಿ ನಾಲ್ಕು ವರ್ಷಗಳೇ ಕಳೆದಿದ್ದರೂ, ಈ ವಲಯದಲ್ಲಿ ಪ್ರಗತಿದಾಯಕ ಚಲನೆ ಕಂಡುಬರುತ್ತಿಲ್ಲ.
ಜನ ಈ ಬಗೆಯ ವಾಹನಗಳನ್ನು ಇಷ್ಟಪಟ್ಟರೂ ಕೂಡ, ಚಾರ್ಜಿಂಗ್ ಕೇಂದ್ರಗಳಂತಹ ಮೂಲಸೌಕರ್ಯ ಕೊರತೆ ಸಮಸ್ಯೆ ಸೃಷ್ಟಿಸುತ್ತದೆ ಎಂಬುದು ಅಷ್ಟೇ ಸತ್ಯ. ಈ ವಾಹನಗಳಿಗೆ ಎರಡನೇ ಮಾರುಕಟ್ಟೆ ಸೃಷ್ಟಿಯಾಗುವವರೆಗೂ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಸಾಲ ನೀಡಲು ಹಿಂಜರಿಯುತ್ತವೆ. ಇಂತಹ ವಾಹನ ಖರೀದಿಸಲು ಬಯಸುವ ಗ್ರಾಹಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ಹಂತದವರೆಗೆ ಬೆಂಬಲ ನೀಡಬೇಕಿದೆ. ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಸ್ಥಿರಗೊಳಿಸುವ ಸಲುವಾಗಿ ತೆರಿಗೆ ಕಡಿತ, ಆದಾಯ ತೆರಿಗೆ ಪ್ರಯೋಜನ ಮತ್ತು ಕೆಲವು ಘಟಕಗಳಿಗೆ ಆಮದು ಸುಂಕ ವಿನಾಯಿತಿ, ಬಿಡಿಭಾಗಗಳ ಪೂರೈಕೆಯಂತಹ ಪ್ರೋತ್ಸಾಹ ಒದಗಿಸಬೇಕಾಗಿದೆ. ಸ್ಕೂಟರ್ ಮತ್ತು ಮೋಟರ್ ಸೈಕಲ್ಗಳು ಇದರ ಮೊದಲ ಲಾಭ ಪಡೆಯಲಿವೆ. 55,000 ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ, ಸಬ್ಸಿಡಿಯಿಂದಾಗಿ ಸುಮಾರು ಹತ್ತು ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಪ್ರಪಂಚದಾದ್ಯಂತ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿದ ಅನುಭವ ಕಡಿಮೆ ಮಟ್ಟದ್ದು. ಭಾರತಕ್ಕೆ ಹೋಲಿಸಿದರೆ ಇಂತಹ ವಾಹನ ಬಳಸುವ ದೇಶಗಳಲ್ಲಿ ಜನರ ಆಯ್ಕೆ, ವಾಹನ ಪ್ರಕಾರ ಹಾಗೂ ಮೂಲಸೌಕರ್ಯ ಲಭ್ಯತೆ ತುಂಬಾ ಭಿನ್ನ. ಹೀಗಾಗಿ, ಪ್ರತಿಯೊಂದು ಹಂತದಲ್ಲೂ ಜಾಗರೂಕರಾಗಿರುವುದು ಬಹಳ ಮುಖ್ಯ. ಏಕೆಂದರೆ ಯಾವುದೇ ತಪ್ಪು ಗಂಭೀರ ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮರೆಯಬಾರದು.
ದೇಸಿ ಬ್ಯಾಟರಿಗಳ ಭವಿಷ್ಯ
ವಿಶ್ವದೆಲ್ಲೆಡೆ ಆಟೊಮೊಬೈಲ್ ಕ್ಷೇತ್ರದಲ್ಲಿ ಆರ್ಥಿಕ ಹಿಂಜರಿತದ ಸೂಚನೆಗಳು ಕಂಡುಬರುತ್ತಿವೆ. ಭಾರತದಲ್ಲಿ ಈ ಉದ್ಯಮದಲ್ಲಿ ನೇರ ಹಾಗೂ ಪರೋಕ್ಷವಾಗಿ ತೊಡಗಿಕೊಂಡ ಮೂರು ಲಕ್ಷ ಉದ್ಯೋಗಿಗಳು ಈ ವರ್ಷ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುವ ಮುನ್ಸೂಚನೆ ಇದೆ ಎಂಬ ವಾದ ಮಂಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಕಾರುಗಳು ವಾಹನ ವ್ಯವಸ್ಥೆಯಲ್ಲಿ ಕ್ರಾಂತಿಯುಂಟುಮಾಡುವ ಸಾಧ್ಯತೆಯಿದೆ. ಇದರಿಂದಾಗಿ ಈಗಿನ ತೈಲ ವಾಹನಗಳಂತೆ ಗೇರ್ ಬದಲಿಸುವ ಉಪಕರಣಗಳ ಅಗತ್ಯ ಬೀಳುವುದಿಲ್ಲ. ನಿಸ್ಸಂಶಯವಾಗಿ, ವಾಹನ ತಯಾರಕರು ಇದೇ ರೀತಿಯ ಉಪಕರಣಗಳಿಗೆ ಬಂಡವಾಳ ಹೂಡುವ ಮುನ್ನ ಎರಡು ಬಾರಿ ಯೋಚಿಸಬೇಕಾದೀತು.
ಗ್ರಾಹಕರು ತೈಲ-ಚಾಲಿತ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಕ್ಕೆ ಬದಲಾಗುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸರ್ಕಾರ ಕೂಲಂಕಷವಾಗಿ ಅಧ್ಯಯನ ಮಾಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇಡೀ ದೇಶ ಶೇ, ನೂರರಷ್ಟು ವಿದ್ಯುದ್ದೀಕರಣಗೊಂಡಿಲ್ಲ. ವಿದ್ಯುದ್ದೀಕರಿಸಿದ ಪ್ರದೇಶಗಳಲ್ಲಿಯೂ ಪೂರೈಕೆಯ ಗುಣಮಟ್ಟ ಉತ್ತಮವಾಗಿಲ್ಲ. ಲಕ್ಷಾಂತರ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಾಗ ವಾರ್ಷಿಕವಾಗಿ ಎಷ್ಟು ವಿದ್ಯುತ್ ಅಗತ್ಯವಿದೆ ಎಂಬುದರ ಬಗ್ಗೆ ಸರಿಯಾದ ಲೆಕ್ಕಾಚಾರ ನಡೆದಿಲ್ಲ. ಈ ನಿಟ್ಟಿನಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಇಂಧನ ಮಾರಾಟದಿಂದ ಬರುವ ಆದಾಯ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಆದಾಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ಣಾಯಕ. ಎಲೆಕ್ಟ್ರಿಕ್ ವಾಹನಗಳಿಂದಾಗಿ ಅಂತಹ ಆದಾಯ ಕಳೆದುಕೊಳ್ಳಲು ಯಾವುದೇ ರಾಜ್ಯ ಸರ್ಕಾರ ಸಿದ್ಧ ಇದೆಯೇ ಎಂಬ ಅನುಮಾನವಿದೆ. ತೈಲ ಮಾರಾಟದಿಂದ ಎಲ್ಲಾ ರಾಜ್ಯಗಳಿಗೆ ಬರುವ ವಾರ್ಷಿಕ ಆದಾಯ ರೂ. 1.9 ಲಕ್ಷ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಬಗೆಯ ಆದಾಯ ನಷ್ಟ ರಾಜ್ಯಗಳ ಬಜೆಟ್ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಮೊದಲ ಎಲೆಕ್ಟ್ರಿಕ್ ವಾಹನ ನಾಲ್ಕು ಚಕ್ರದ್ದು ಅಥವಾ ಕಾರು ಆಗಿರಲಿದೆ. ಸೌಲಭ್ಯಗಳಿಗೆ ಕೊರತೆ ಇರದಿದ್ದರೂ ಬೆಲೆ ಅಧಿಕ. ನಿಸ್ಸಂಶಯವಾಗಿ, ಸಾರ್ವಜನಿಕರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಗ್ರಾಹಕರ ದೃಷ್ಟಿಯಿಂದ ನೋಡಿದಾಗ ಗಾಡಿಯ ವೆಚ್ಚ ಮತ್ತು ಸರ್ವೀಸ್ ವೆಚ್ಚ ಮುಖ್ಯ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳಿಗೆ ಸರ್ವೀಸ್ ಮತ್ತು ಬಿಡಿಭಾಗಗಳ ಅಗತ್ಯ ಇರುವುದಿಲ್ಲ. ಆಗ ವಾಹನ ಸರ್ವೀಸ್ ಮತ್ತು ಬಿಡಿಭಾಗಗಳ ಮಾರಾಟಕ್ಕೆ ಸಾಕಷ್ಟು ಆದಾಯ ವಿನಿಯೋಗಿಸುತ್ತಿರುವ ವಿತರಕರನ್ನು (ಡೀಲರ್) ಕಂಪನಿಗಳು ಹೇಗೆ ತೃಪ್ತಿಪಡಿಸುತ್ತವೆ ಎಂಬುದು ಸಮಸ್ಯೆ. ಏಕೆಂದರೆ ಬಿಡಿಭಾಗಗಳ ಮಾರಾಟದಿಂದ ಬರುವ ಆದಾಯವನ್ನು ಯಾರೂ ಕಳೆದುಕೊಳ್ಳಲು ಬಯಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಿ ವಿತರಕರಿಂದ ಸೂಕ್ತ ಮೊತ್ತ ಪಡೆಯುವ ಸಾಧ್ಯತೆಗಳಿವೆ.
ಎಲೆಕ್ಟ್ರಿಕ್ ವಾಹನ ವಲಯದ ಪೂರ್ಣ ಲಾಭ ಪಡೆಯಬೇಕೆಂದರೆ, ಅವುಗಳಲ್ಲಿ ಬಳಸುವ ಬ್ಯಾಟರಿಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಬೇಕು. ಬ್ಯಾಟರಿ ಆಮದನ್ನು ಅವಲಂಬಿಸುವುದು ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ. ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಬಹುದು ಅಥವಾ ಬೇರೆಡೆಯಿಂದ ಪಡೆಯಬಹುದು. ಪ್ರತಿದಿನವೂ ಎಲೆಕ್ಟ್ರಿಕ್ ಕಾರನ್ನು ಬಳಸುವಾಗ ಬ್ಯಾಟರಿ ಚಾರ್ಜಿಂಗ್ ದೊಡ್ಡ ಸಮಸ್ಯೆ. ಈ ವಿಷಯದಲ್ಲಿ ಉದ್ಭವಿಸುವ ಯಾವುದೇ ತೊಂದರೆ ಭಾರಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಸರ್ಕಾರದ ನೀತಿ ಮತ್ತು ಆಡಳಿತ ವೈಖರಿ ದೂಷಣೆಗೆ ತುತ್ತಾಗಬಹುದು. ‘ಎಲೆಕ್ಟ್ರಿಕ್ ವಾಹನ’ ... ಈ ಪದ ಈಗ ಆಸಕ್ತಿ ಹುಟ್ಟಿಸುವಂತಿದ್ದರೂ ಅದರ ವ್ಯಾಪಕ ಜನಪ್ರಿಯತೆಗಾಗಿ ನಾವು ಸ್ವಲ್ಪ ಸಮಯ ಕಾಯಬೇಕು. ಈ ಸಂದರ್ಭದಲ್ಲಿ ಮಾಡಬೇಕಾದ ಮೊದಲ ಕೆಲಸ ಎಂದರೆ, ಚೀನಾದಂತೆ ಭಾರತೀಯರಿಗೆ ಸ್ಕೂಟರ್ ರೀತಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಲಭಿಸುವಂತೆ ಮಾಡಬೇಕು. ಬಳಿಕ ಸಣ್ಣ ಕಾರುಗಳು ಮತ್ತು ದೊಡ್ಡ ವಾಹನಗಳನ್ನು ವಿದ್ಯುತ್ ಚಾಲಿತ ವಾಹನಗಳಾಗಿ ಬದಲಿಸಬಹುದು. ಈ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ, ಉದ್ಯಮ ಪ್ರತಿನಿಧಿಗಳು ಮತ್ತಿತರ ಮಧ್ಯವರ್ತಿಗಳೊಂದಿಗೆ ಚರ್ಚಿಸಲು ಸಲಹೆ ನೀಡಲಾಗಿದೆ.
ಚಾರ್ಜಿಂಗ್ ಸಮಸ್ಯೆ ನಿವಾರಣೆಗೆ ಒತ್ತು
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಸಾಮರ್ಥ್ಯ ಅಲಕ್ಷಿಸಲು ಸಾಧ್ಯ ಇಲ್ಲ. ಪ್ರತಿ ಸಾವಿರ ಭಾರತೀಯರಲ್ಲಿ 27 ಮಂದಿ ಕಾರಿನ ಮಾಲೀಕರಾಗಿದ್ದಾರೆ. ಆದರೆ ಪ್ರತಿ ಸಾವಿರ ಜರ್ಮನ್ನರಿಗೆ 570 ಕಾರುಗಳಿವೆ. ಈ ಪರಿಸ್ಥಿತಿ ಜಾಗತಿಕ ವಾಹನ ತಯಾರಕರಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಮುಂದಿನ ವರ್ಷದವರೆಗೆ ಮಾರುತಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಪರಿಚಯಿಸುವ ಸಾಧ್ಯತೆ ಇಲ್ಲ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪೆನಿಗಳು ಕೆಲ ಮೂಲ ಸೌಲಭ್ಯಗಳಿರುವ ಎಲೆಕ್ಟ್ರಿಕ್ ಕಾರುಗಳ ನಿರ್ಮಿತಿಯಲ್ಲಿ ತೊಡಗಿವೆ. ಕೇವಲ ಒಂದು ಸೀಮಿತ ಉತ್ಪಾದನೆಗೆ ಮಾತ್ರವಲ್ಲದೆ, ಸರ್ಕಾರದ ಬಳಕೆಗೆ ಕೂಡ ಇಂತಹ ಕಾರುಗಳನ್ನು ಅವು ಸಿದ್ಧಪಡಿಸುತ್ತಿವೆ.
ಭಾರತದಲ್ಲಿ ಕಳೆದ ವರ್ಷ ಅತಿ ಹೆಚ್ಚು ಮಾರಾಟವಾಗಿದ್ದು ಗ್ರಾಹಕ ಇಂಧನ ವಾಹನಗಳು. ಇವುಗಳ ಬೆಲೆ ಗರಿಷ್ಠ ರೂ. 5.80 ಲಕ್ಷ ಮತ್ತು ಅದಕ್ಕಿಂತ ಕಡಿಮೆ. ಇಂಧನ ಕಾರುಗಳ ಬೆಲೆಯೊಂದಿಗೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಸ್ಪರ್ಧಿಸಲು 2030 ರವರೆಗೆ ಸಮಯ ಹಿಡಿಯಬಹುದು ಎಂದು ತಜ್ಞರು ಹೇಳುತ್ತಾರೆ. ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಆದರೆ ಬೆಲೆ ಬಗ್ಗೆ ಅವರಿಗೆ ತಿಳಿದಿಲ್ಲ. ಮತ್ತೊಂದೆಡೆ, ಈಗಾಗಲೇ ಮಾರುಕಟ್ಟೆಯಲ್ಲಿ ಕೋನಾ ರೀತಿಯ ಎಲೆಕ್ಟ್ರಾನಿಕ್ ಕಾರುಗಳನ್ನು ಖರೀದಿಸಲು ಶಕ್ತರಾದ ಗ್ರಾಹಕರಿಗೆ ಬ್ಯಾಟರಿ ರೀಚಾರ್ಜ್ ಸಮಸ್ಯೆ ಕಾಡುತ್ತಿದೆ. 2018 ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳು ಮತ್ತು ಎಸ್ ಯು ವಿಗಳಿಗಾಗಿ ದೇಶದಲ್ಲಿ 650 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಯೋಜನೆ ಇತ್ತು. ಎಲೆಕ್ಟ್ರಿಕ್ ವಾಹನಗಳ ಬೃಹತ್ ಮಾರುಕಟ್ಟೆ ಎಂದು ಜನಜನಿತವಾದ ಚೀನಾದಲ್ಲಿ 4.56 ಲಕ್ಷ ಚಾರ್ಜಿಂಗ್ ಕೇಂದ್ರಗಳಿವೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಚಾರ್ಜಿಂಗ್ ಸೌಲಭ್ಯ ಹೆಚ್ಚಿಸಿ ಆ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟ ವೃದ್ಧಿಸುವ ಅಗತ್ಯತೆ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಈ ಬಗೆಯ ವಾಹನಗಳ ತಯಾರಕರು ಚರ್ಚಿಸಿದ್ದಾರೆ.
ಉದ್ಯಮಕ್ಕೆ ಹೊಸ ಗುರಿ
ಭಾರತದಲ್ಲಿ ನಿರ್ಮಾಣವಾಗುವ ವಾಹನಗಳಲ್ಲಿ ಕನಿಷ್ಟ 2ರಿಂದ 3ರಷ್ಟು ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಿರಬೇಕು ಎಂಬುದನ್ನು ದೃಢಪಡಿಸುವಂತೆ ಕೇಂದ್ರ ಸರ್ಕಾರ ಉದ್ಯಮವನ್ನು ಕೋರಿದೆ. ತಮ್ಮ ಸರಾಸರಿ ಇಂಧನ ಬಳಕೆಯ ಗುರಿ ತಲುಪಿದ ತಯಾರಕರು ಈ ಮಟ್ಟದವರೆಗೆ ವಿದ್ಯುತ್ ಚಾಲಿತ ವಾಹನಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಕಾರ್ಪೊರೇಟ್ ಸರಾಸರಿ ಇಂಧನ ಮಿತವ್ಯಯ (ಸಿಎಎಫ್ಇ) ನಿಯಮ ಅನುಸರಿಸಲು ವಾಹನ ತಯಾರಕರು ಈಗ ತಮ್ಮ ಇಂಧನ ಬಳಕೆಯ ಕನಿಷ್ಠ ಶೇ 30ರಷ್ಟು ಮಿತವ್ಯಯ ಮಾಡಬೇಕಾಗಿದೆ. ಇದು ವಿಶ್ವದಾದ್ಯಂತ ತಯಾರಿಸಿದ ವಾಹನಗಳೊಂದಿಗೆ ಭಾರತೀಯ ವಾಹನಗಳು ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಬಲ ತುಂಬುವ ಉದ್ದೇಶದಿಂದ ಭಾರತದಲ್ಲಿ ಸಿಎಎಫ್ಇ ಗುಣಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.