ನವದೆಹಲಿ: 2022ರ ಜಾಗತಿಕ ಮಟ್ಟದ 91ನೇ ಇಂಟರ್‌ಪೋಲ್ ಸಾಮಾನ್ಯ ಸಭೆಯು ಭಾರತದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಲಿಯ ಸ್ಯಾಂಟಿಯಾಗೋದಲ್ಲಿ 88ನೇ ಸಾಮಾನ್ಯ ಸಭೆಯಲ್ಲಿ 91ನೇ ಸಭೆಯಲ್ಲಿ ಭಾರತದಲ್ಲಿ ಆಯೋಜಿಸುದ ಪ್ರಸ್ತಾಪವನ್ನು ಭಾರತದ ಇಂಟರ್‌ಪೋಲ್ ಅನ್ನು ಪ್ರತಿನಿಧಿಸಿದ ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಅವರು ಪ್ರಸ್ತಾಪಿಸಿದ್ದರು. ಸದಸ್ಯ ರಾಷ್ಟ್ರಗಳು ಒಮ್ಮತದಿಂದ ಭಾರತದ ಮನವಿಯನ್ನು ಅಂಗೀಕರಿಸಿದರು ಎಂದು ಸಿಬಿಐ ವಕ್ತಾರ ನಿತಿನ್ ವಾಕಂಕರ್ ತಿಳಿಸಿದ್ದಾರೆ.
ಆಗಸ್ಟ್ನಲ್ಲಿ ಇಂಟರ್‌ಪೋಲ್ ಸೆಕ್ರೆಟರಿ ಜನರಲ್ ಜುರ್ಗೆನ್ ಸ್ಟಾಕ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ಮಾಡಿದ್ದರು. ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ 2022ರಲ್ಲಿ 91ನೇ ಇಂಟರ್‌ಪೋಲ್ ಸಾಮಾನ್ಯ ಸಭೆ ಭಾರತದಲ್ಲಿ ಆಯೋಜಿಸಲು ಮನವಿ ಮಾಡಿದ್ದರು. ಹೀಗಾಗಿ, ಭಾರತದ ಪ್ರಸ್ತಾವನೆಯ ಪರ ಅಧಿಕ ಮತಗಳು ಬಿದ್ದಿವೆ. 2022ರ ಸಭೆಯು ಭಾರತದಲ್ಲಿ ನಡೆಯಲಿದೆ ಎಂದರು.
ಇಂಟರ್ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಷನ್ (ಇಂಟರ್‌ಪೋಲ್) ಸಾಮಾನ್ಯ ಸಭೆಯನ್ನು ಭಾರತ 1997ರಲ್ಲಿ ಆಯೋಜಿಸಿತ್ತು. ಬರೋಬ್ಬರಿ 22 ವರ್ಷಗಳ ಬಳಿಕ ಇಂತಹದೊಂದು ಸಭೆ ಆಯೋಜಿಸಲು ಸಜ್ಜಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಮತ್ತು ಮಧ್ಯಪ್ರದೇಶದ ಪೊಲೀಸ್ ಮುಖ್ಯಸ್ಥ ವಿ. ಕೆ. ಸಿಂಗ್ ಕೂಡ ಸಿಬಿಐ ನಿರ್ದೇಶಕರೊಂದಿಗೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.