ನವದೆಹಲಿ: ಕೊರೊನಾ ಹರಡುವಿಕೆ ನಿಯಂತ್ರಿಸಲು ಹಾಗೂ ಲಾಕ್ಡೌನ್ ಕಾರಣಕ್ಕೆ ಮಾರ್ಚ್ 25ರಿಂದ ಸ್ಥಗಿತಗೊಳಿಸಲಾಗಿದ್ದ ವಾಣಿಜ್ಯ ಉದ್ದೇಶದ ಅಂತಾರಾಷ್ಟ್ರೀಯ ವಿಮಾನಯಾನ ಓಡಾಟ ನಿರ್ಬಂಧವನ್ನು ನವೆಂಬರ್ 30ರವರೆಗೆ ಮುಂದುವರೆಸಲಾಗಿದೆ.
ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದ್ದು, ಈ ನಿರ್ಬಂಧವು ಅಂತಾರಾಷ್ಟ್ರೀಯ ಆಲ್ - ಕಾರ್ಗೋ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.
ವಿಮಾನ ನಿಲ್ದಾಣ ಪ್ರಾಧಿಕಾರವು ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಬಹುದು ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಸ್ತುತ ಭಾರತ ಕೆಲವು ರಾಷ್ಟ್ರಗಳೊಂದಿಗೆ ''ಏರ್ ಬಬಲ್'' ಒಪ್ಪಂದ ಮಾಡಿಕೊಂಡಿದ್ದು, ಇದು ಒಪ್ಪಂದ ಮಾಡಿಕೊಂಡ ರಾಷ್ಟ್ರಗಳ ನಡುವೆ ವಿಮಾನಯಾನ ಸೇವೆಗೆ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ದೇಶೀಯ ವಿಮಾನ ಸೇವೆಗಳು ಮೇ 25ರಿಂದಲೇ ಆರಂಭವಾಗಿದ್ದು, ಹಲವು ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸುತ್ತಿವೆ.