ಪ್ರಯಾಗರಾಜ್: ಉತ್ತರಪ್ರದೇಶದ ನೈನಿ ಕೊತವಾಲಿ ಚಕರ್‌ಘುನಾಥ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗಳು ತಮ್ಮನ ಮೇಲೆಯೇ ಗುಂಡು ಹಾರಿಸಿದ್ದಾಳೆ. ಬಳಿಕ ಆಕೆ ತನಿಖೆಯಲ್ಲಿ ಪೊಲೀಸರ ದಾರಿ ತಪ್ಪಿಸಲು ಇದನ್ನು ಯಾರೋ ದುಷ್ಕರ್ಮಿಗಳು ಮಾಡಿ, ಮನೆಯಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ ಎಂದು ಸುಳ್ಳು ಹೇಳಿದ್ದಾಳೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಅಲ್ಲಿನ ಎಸ್ಆರ್ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಸರಿಯಾಗಿ ತನಿಖೆ ನಡೆಸಿದ ಬಳಿಕ ಮನೆಯ ಒಳಗೆ ಯಾವುದೇ ದುಷ್ಕರ್ಮಿಗಳು ಬಂದಿಲ್ಲ ಎಂದು ತಿಳಿದುಬಂದಿದೆ. ಬದಲಿಗೆ ಯಾರೋ ಮನೆಯೊಳಗೆ ಇರುವವರು ಇದನ್ನು ಮಾಡಿದ್ದಾರೆ ಎಂಬುದು ಖಚಿತವಾಗಿದೆ.
ನೈನಿಯ ಚಕರ್‌ಘುನಾಥ್ ಪ್ರದೇಶದ ನಿವಾಸಿ ಸಭಾಜಿತ್ ಸಿಂಗ್ ಅವರನ್ನು ಅಜಮ್‌ಗಡ ಜಿಲ್ಲೆಯ ಇನ್ಸ್ಪೆಕ್ಟರ್ ಆಗಿ ನೇಮಿಸಲಾಗಿದೆ. ಮನೆಯಲ್ಲಿ ಅವರ ಪತ್ನಿ ಸುಭದ್ರಾ ದೇವಿ ಮತ್ತು ಏಕೈಕ ಪುತ್ರ ಅಮರೇಂದ್ರ ಸಿಂಗ್ ಹಾಗೂ ಮಗಳು ಇದ್ದರು. ಅಮರೇಂದ್ರ ಸಿಂಗ್ ಜಿಐಸಿಯಲ್ಲಿ 11ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಾನೆ. ಮಂಗಳವಾರ ರಾತ್ರಿ ಅಮರೇಂದ್ರನ ಕೋಣೆಯಿಂದ ಗುಂಡಿನ ಸದ್ದು ಕೇಳಿಬಂದಿದೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸಹೋದರಿ ಸೇರಿದಂತೆ ನೆರೆಹೊರೆಯವರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಪರಿಶೀಲಿಸಿದ್ದಾರೆ. ಯಾವುದರಿಂದಲೂ ಮನೆಗೆ ದುಷ್ಕರ್ಮಿಗಳು ಬಂದು ಹೋದ ಪುರಾವೆ ದೊರೆತಿಲ್ಲ. ತಾಯಿಗೆ ಆರೋಗ್ಯ ಹದಗೆಟ್ಟಿದ್ದು, ಅನುಮಾನಗೊಂಡ ಪೊಲೀಸರು ಸಹೋದರಿಯನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಉತ್ತರ ನೀಡುವಾಗ ಯುವತಿ ಸಿಕ್ಕಿಹಾಕಿಕೊಂಡಿದ್ದಾಳೆ. ಅಲ್ಲದೇ ಒಡವೆಗಳು ಕೂಡ ಮನೆಯಲ್ಲೇ ಇದ್ದವು. ಇದರಿಂದ ಸಹೋದರಿಯೇ ಸಹೋದರನ ಮೇಲೆ ಗುಂಡು ಹಾರಿಸಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಆಕೆ ಕೂಡ ಇದ್ದನ್ನು ಒಪ್ಪಿಕೊಂಡಿದ್ದಾಳೆ.