ನವದೆಹಲಿ: ಭಾರತದಲ್ಲಿ ಕೋವಿಡ್ ಮೃತರ ಸಂಖ್ಯೆ 1,26,121ಕ್ಕೆ ಏರಿಕೆಯಾಗಿದ್ದರೂ ಸಹ ಇತರ ಕೊರೊನಾ ಪೀಡಿತ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಕಡಿಮೆಯಿದೆ. ಇದೀಗ ಮರಣ ಪ್ರಮಾಣ ಶೇ.1.48ಕ್ಕೆ ಇಳಿಕೆಯಾಗಿದೆ. ಆದರೂ ಲಸಿಕೆ ಲಭ್ಯವಾಗುವವರೆಗೂ ಮುನ್ನೆಚ್ಚರಿಕಾ ಕ್ರಮಗಳು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಲೇ ಇದೆ.
ಕಳೆದ 24 ಗಂಟೆಗಳಲ್ಲಿ 45,674 ಸೋಂಕಿತರು ಪತ್ತೆಯಾಗಿದ್ದು, 559 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 85,07,754ಕ್ಕೆ ಏರಿಕೆಯಾಗಿದೆ. ಇವರಲ್ಲಿ 78,68,968 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 5,12,665 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 7ರವರೆಗೆ 11,77,36,791 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,94,487 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.