ನವದೆಹಲಿ: ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಚೀನಾದ ವುಹಾನ್ನಿಂದ ಮೂವರು ಅಪ್ರಾಪ್ತರು, 211 ವಿದ್ಯಾರ್ಥಿಗಳು, 110 ವೃತ್ತಿನಿರತರು ಸೇರಿದಂತೆ 324 ಮಂದಿ ಭಾರತೀಯರನ್ನು ದೇಶಕ್ಕೆ ಮರಳಿ ಕರೆತರಲಾಗಿದ್ದು, ಬೆಳಗ್ಗೆ 7.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಿದ ಅವರೆಲ್ಲರನ್ನೂ ದೆಹಲಿಯ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಚಾವ್ಲಾ ಶಿಬಿರ (ITBP) ಹಾಗೂ ಹರಿಯಾಣದ ಮನೇಸರ್ನಲ್ಲಿರುವ ಭಾರತೀಯ ಸೇನಾ ಶಿಬಿರಕ್ಕೆ ವೈದ್ಯಕೀಯ ತಪಾಸಣೆಗೆ ಬಸ್ ಮೂಲಕ ಕರೆದೊಯ್ಯಲಾಗಿದೆ.
ಕರ್ನಾಟಕದವರೂ ಇದ್ದಾರೆ:
ಚೀನಾದಲ್ಲಿ ಉದ್ಭವಿಸಿ, ಇದೀಗ ಇಡೀ ಜಗತ್ತನ್ನು ಆವರಿಸುತ್ತಿರುವ ಕೊರೊನಾ ವೈರಸ್ನಿಂದ ಚೀನಾದಲ್ಲಿದ್ದ ಭಾರತೀಯರನ್ನು ರಕ್ಷಿಸುವ ಸಲುವಾಗಿ ಶುಕ್ರವಾರ ಏರ್ ಇಂಡಿಯಾ ವಿಶೇಷ ವಿಮಾನ ದೆಹಲಿಯಿಂದ ವುಹಾನ್ಗೆ ಹಾರಾಟ ನಡೆಸಿತ್ತು. ವುಹಾನ್ನಿಂದ ಕರೆತಂದವರಲ್ಲಿ 23 ರಾಜ್ಯದ ಜನರಿದ್ದು, ಕರ್ನಾಟಕದವರೇ 9 ಮಂದಿಯಿದ್ದಾರೆ. ಒಟ್ಟು 324 ಜನರಲ್ಲಿ 90 ಮಹಿಳೆಯರು ಹಾಗೂ 234 ಪುರುಷರಿದ್ದಾರೆ.
ಚೀನಾಗೆ ತೆರಳಲಿರುವ ಮತ್ತೊಂದು ವಿಮಾನ:
ಇಂದೂ ಕೂಡ ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ವುಹಾನ್ಗೆ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಲಿದ್ದು, ಅಲ್ಲಿರುವ ಭಾರತೀಯ ಪ್ರಜೆಗಳನ್ನು ಹೊತ್ತು ಬರಲಿದೆ. ಏರ್ ಇಂಡಿಯಾದ ಆಪರೇಷನ್ ಡೈರೆಕ್ಟರ್ ಕ್ಯಾ. ಅಮಿತಾಬ್ ಸಿಂಗ್ ರಕ್ಷಣಾ ತಂಡದ ಮುಂದಾಳತ್ವ ವಹಿಸಲಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.