ಹೈದರಾಬಾದ್: ಜಾಗತಿಕ ಮಹಾಮಾರಿ ಕೊರೊನಾಗೆ ಭಾರತ ತಲ್ಲಣಗೊಂಡಿದೆ. ಪ್ರತಿದಿನ 27-28 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ 9 ಲಕ್ಷ ಗಡಿಯತ್ತ ಸಾಗುತ್ತಿದೆ. ಇತ್ತ ಸಾವಿನ ಸಂಖ್ಯೆ ಕೂಡ 23 ಸಾವಿರ ಗಡಿ ದಾಟಿದೆ. ಈ ಮಧ್ಯೆ ಶೇ. 62ರಷ್ಟು ರೋಗಿಗಳು ಗುಣಮುಖರಾಗಿರುವುದು ಮಾತ್ರ ತುಸು ಸಮಾಧಾನಕರ ವಿಚಾರವಾಗಿದೆ.
ದೇಶದ 14 ರಾಜ್ಯಗಳಲ್ಲಿ 10 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದು, ಮಹಾರಾಷ್ಟ್ರವೊಂದರಲ್ಲೇ 2 ಲಕ್ಷಕ್ಕೂ ಹೆಚ್ಚಿನ ಸೋಂಕಿತರ ಮೂಲಕ ಕೋವಿಡ್ ಹಾಟ್ಸ್ಪಾಟ್ ಆಗಿದೆ. ತಮಿಳುನಾಡು ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಲಕ್ಷಕ್ಕೂ ಅಧಿಕ ಕೇಸ್ಗಳು ಪತ್ತೆಯಾಗಿವೆ. ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕೂಡ ಹೆಚ್ಚುತ್ತಿರುವ ಪ್ರಕರಣಗಳು ಪರಿಸ್ಥಿತಿಯ ತೀವ್ರತೆಗೆ ಸ್ಪಷ್ಟ ಉದಾಹರಣೆಗಳಾಗಿವೆ. ಮನುಷ್ಯನ ಜೀವನವನ್ನು ಶೋಚನೀಯವಾಗಿಸುವ ಈ ಕಾಯಿಲೆಯನ್ನು ಎದುರಿಸಲು ಔಷಧಿ ಹಾಗೂ ಲಸಿಕೆ ಕಂಡುಹಿಡಿಯಲು ಹಲವಾರು ದೇಶಗಳಲ್ಲಿ ವ್ಯಾಪಕವಾಗಿ ಪ್ರಯೋಗಗಳು ನಡೆಯುತ್ತಿವೆ.
ಕೆಲ ವೈದ್ಯರು ಕೊರೊನಾ ರೋಗಿಗಳಿಗೆ ಫ್ಯಾಬಿಫ್ಲೂ (ಫ್ಲೂ ನಿಯಂತ್ರಣಕ್ಕಾಗಿ ಬಳಸುವ ಜಪಾನಿನ ಔಷಧಿ)ಯನ್ನು ಪ್ರಯೋಗಿಸಿ ಚಿಕಿತ್ಸೆ ನೀಡುತ್ತಿದ್ದರೆ, ಇನ್ನು ಕೆಲವೆಡೆ ರೆಮ್ಡೆಸಿವಿರ್ (ಎಬೋಲಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ ಔಷಧಿ)ಯನ್ನು ಹಾಗೂ ಇನ್ನೂ ಕೆಲವು ವೈದ್ಯರು ಮಲೇರಿಯಾ ರೋಗಿಗಳಿಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಪ್ರಯೋಗಿಸುತ್ತಿದ್ದಾರೆ. ಇದರ ನಡುವೆ ಭಾರತವು ಮೊದಲ ದೇಶೀಯ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ 'ಕೊವಾಕ್ಸಿನ್' ಹೆಸರಿನ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 15ರ ಒಳಗೆ ಮಾನವನ ಮೇಲೆ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಫಲಿತಾಂಶವನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ 'ಕೊವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡು, ಇದರ ಫಲಿತಾಂಶವನ್ನು ಆ. 15ರ ಒಳಗಾಗಿ ಬಿಡುಗಡೆ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಹೀಗಾಗಿ ಈಗಾಗಲೇ ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ ಭಾರತ್ ಬಯೋಟೆಕ್ ನೋಂದಣಿಗಳನ್ನು ಪ್ರಾರಂಭಿಸಿದೆ. ಆ. 15ರ ಒಳಗೆ ಇದು ಸಾಧ್ಯವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು, ಅನೇಕರು ಐಸಿಎಂಆರ್ನ ಈ ನಿರ್ಧಾರ ಅವೈಜ್ಞಾನಿಕವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ.
ಇನ್ನು ರಷ್ಯಾದ ಸೆಚೆನೋವ್ದಲ್ಲಿ ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಮಾಸ್ಕೋ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯ ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಶನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ. ಲಸಿಕೆ ಪ್ರಯೋಗಿಸಲ್ಪಟ್ಟ ಮೊದಲ ತಂಡದ ಸ್ವಯಂ ಸೇವಕರನ್ನು ಜುಲೈ 15ರಂದು ಹಾಗೂ 2ನೇ ತಂಡದವರನ್ನು ಜುಲೈ 20ರಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಮನುಷ್ಯರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತದಲ್ಲಿ ಭಾರತ್ ಬಯೋಟೆಕ್ ಮತ್ತು ಜೈಡಸ್-ಕ್ಯಾಡಿಲಾ ಎಂಬ ಸಂಸ್ಥೆಗಳಿಗೆ ಮಾತ್ರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜೆಐ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಮೋದನೆ ದೊರೆತಿದೆ. ವಿಶ್ವದಾದ್ಯಂತ ವಿವಿಧ ಹಂತಗಳಲ್ಲಿ ಸುಮಾರು 140 ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಈ ಪೈಕಿ ಮಾನವನ ಮೇಲೆ ಪ್ರಯೋಗಿಸುವ ಹಂತದಲ್ಲಿ 12ಕ್ಕೂ ಹೆಚ್ಚು ಲಸಿಕೆಗಳಿವೆ. ಕೆಲವು ದೇಶಗಳು ಆರಂಭಿಕ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರೂ ವಾಣಿಜ್ಯ ಬಳಕೆಗೆ ಅನುಮತಿಗಳನ್ನು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರ ಪ್ರಕಾರ, ಚೀನಾ ತಾನು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳಲ್ಲಿ ಒಂದನ್ನು ಸೇನೆಯ ಬಳಕೆಗಾಗಿ ಮೀಸಲಿಟ್ಟಿದೆ. ಅದರ ಮೂರನೇ ಹಂತದ ಪ್ರಯೋಗದ ಬಳಿಕವೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಬಳಸಬಹುದು. ಇದಕ್ಕೆ ಕನಿಷ್ಠ 12-18 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮಾನವರ ಮೇಲೆ ಮೂರು ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಲು 6-9 ತಿಂಗಳ ಸಮಯ ಬೇಕು ಎಂದು ಸಿಸಿಎಂಬಿ (ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ) ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ನಿಲುವುಗಳನ್ನು ಬದಲಿಸಲು ಹೊರಟಿರುವ ಐಸಿಎಂಆರ್, ವಿವಿಧ ಹಂತಗಳಲ್ಲಿನ ವಿಳಂಬವನ್ನು ತಪ್ಪಿಸುವ ಮೂಲಕ ಪ್ರಾಯೋಗಿಕ ಹಂತವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಈ ದೊಡ್ಡ ಜವಾಬ್ದಾರಿಯನ್ನು ಹೆಚ್ಚು ಎಚ್ಚರಿಕೆಯಿಂದ ನಿರ್ವಹಿಸಬೇಕಿದ್ದು, ಪ್ರತಿ ಹಂತದಲ್ಲಿ ವಿಜ್ಞಾನಿಗಳಿಗೆ ಸರಿಯಾದ ನಿರ್ದೇಶನ ನೀಡಬೇಕಿದೆ.