ನವದೆಹಲಿ: ಪೂರ್ವ ಲಡಾಖ್ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಯಲ್ಲಿ ಚೀನಾದ ಸೈನಿಕರು ತಮ್ಮ ಸ್ಥಾನದಿಂದ ಮುಂದಕ್ಕೆ ಬರುವುದನ್ನು ತಡೆಯಲು ಭಾರತೀಯ ಸೈನಿಕರು ಮುಳ್ಳುತಂತಿಯಿಂದ ಬೇಲಿಗಳನ್ನು ನಿರ್ಮಿಸುತ್ತಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಹೊಂದಿದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಸೈನಿಕರು ಭಾರತದ ಹಿಡಿತದಲ್ಲಿರುವ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಭಾರತ ತನ್ನ ಭೂಪ್ರದೇಶವನ್ನು ಪ್ರವೇಶಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡುತ್ತಲೇ ಇದೆ.
ಎಲ್‌ಎಸಿಯಲ್ಲಿ ಉದ್ವಿಗ್ನತೆಯನ್ನು ತಪ್ಪಿಸುವ ಸಲುವಾಗಿ, ಚೀನಾದ ಪ್ರಚೋದನಕಾರಿ ಮತ್ತು ಆಕ್ರಮಣಕಾರಿ ಪ್ರಯತ್ನ ತಡೆಯಲು ಬೇಲಿಗಳನ್ನು ಹಾಕಲಾಗುತ್ತಿದೆ. ಚೀನಾ ಸೈನ್ಯವು ಆಕ್ರಮಣ ಪ್ರಯತ್ನಗಳನ್ನು ಮುಂದುವರಿಸಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭಾರತ ಎಚ್ಚರಿಸಿದೆ.
ಪೂರ್ವ ಲಡಾಖ್ನಲ್ಲಿರುವ ಎಲ್‌ಎಸಿಯಲ್ಲಿ ಭಾರತೀಯ ಮತ್ತು ಚೀನಾದ ಮಿಲಿಟರಿ ಪ್ರತಿನಿಧಿಗಳು ಬುಧವಾರ ಚರ್ಚೆ ನಡೆಸಿದರು. ಈ ವೇಳೆ, ಚೀನಾದ ಸೈನ್ಯವು ಪ್ರಚೋದನಕಾರಿ ಮಿಲಿಟರಿ ಆಂದೋಲನಗಳನ್ನು ನಡೆಸಿದರೆ ಭಾರತೀಯ ಸೈನಿಕರು ಪ್ರತೀಕಾರ ತೀರಿಸುತ್ತಾರೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.