ನವದೆಹಲಿ: ಪ್ರಪಂಚದಾದ್ಯಂತ ಕೊರೊನಾ ಸೋಂಕು ಹರಡುತ್ತಿರುವುದರಿಂದ, ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಂತಹ ಪ್ರಮುಖ ಕಾರ್ಯಾಚರಣೆ ಸ್ವತ್ತುಗಳು ವೈರಸ್‌ನಿಂದ ಮುಕ್ತವಾಗಿರಬೇಕು ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.
ನೌಕಾಪಡೆಯ ಎಲ್ಲ ಸಿಬ್ಬಂದಿಗೆ ವಿಡಿಯೋ ಮೂಲಕ ಸಂದೇಶ ನೀಡಿದ ಅವರು, ಈ ಮಾರಕ ಸಾಂಕ್ರಾಮಿಕ ರೋಗವು ಹಿಂದೆಂದೂ ಕಾಣದ ರೀತಿಯಲ್ಲಿ ಜಗತ್ತನ್ನು ವಕ್ಕರಿಸಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಈ ಸೋಂಕು ಪ್ರಭಾವ ಬೀರಿದೆ. ಸೋಂಕಿನಿಂದ ಎಚ್ಚರವಾಗಿರಿ. ಇದಕ್ಕಾಗಿ ನಿಮ್ಮ ಪ್ರಯತ್ನವನ್ನು ದುಪ್ಪಟ್ಟು ಮಾಡಿ ಎಂದು ಹೇಳಿದ್ದಾರೆ.
ನಮ್ಮ ಸಿಬ್ಬಂದಿ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕಾಗಿದೆ. ನಮ್ಮ ದೇಶದ ಕಾರ್ಯಾಚರಣೆಯ ಸೊತ್ತುಗಳು, ವಿಶೇಷವಾಗಿ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ವೈರಸ್‌ನಿಂದ ಮುಕ್ತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಸಿಂಗ್ ಹೇಳಿದ್ದಾರೆ.
ಹಡಗು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಅಂತರ ಕಾಪಾಡಿಕೊಳ್ಳುವುದು ಒಂದು ಸವಾಲಾಗಿರುವುದರಿಂದ, ಇದು ತುಂಬಾ ಕಷ್ಟಕರವಾದ ಕೆಲಸ. ನೀವು ಎಲ್ಲಾ ಸಮಯದಲ್ಲೂ ಮುಖವಾಡಗಳನ್ನು ಧರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಸಿಂಗ್ ತಮ್ಮ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.