ಹರಿಯಾಣ: ಭಾರತದ ಹಾಕಿ ತಂಡಕ್ಕೆ ಪ್ರತಿಭಾವಂತ ಮಹಿಳಾ ನಾಯಕಿಯರನ್ನು ಕೊಟ್ಟ ಗೌರವ ಹರಿಯಾಣ ರಾಜ್ಯಕ್ಕೆ ಸಲ್ಲುತ್ತದೆ. ಅದರಲ್ಲಿ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಮಾರ್ಕಂದಾ ಎಂಬ ಸಣ್ಣ ಗ್ರಾಮದಿಂದ ಬಂದ, ರಾಣಿ ರಾಮ್ಪಾಲ್ ಕೂಡ ಒಬ್ಬರು. ರಾಣಿ ಅವರ ಹಾಕಿ ಪ್ರಯಾಣ ಕೇಕ್ ವಾಕ್ ಆಗಿರಲಿಲ್ಲ. ಸಾಕಷ್ಟು ಏಳು-ಬೀಳುಗಳನ್ನು ಅವರು ತಮ್ಮ ಹಾಕಿ ಪ್ರಯಾಣದಲ್ಲಿ ನೋಡಿದ್ದಾರೆ. ರಾಣಿ ರಾಮ್ಪಾಲ್ ಸಾಧನೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಹರಿಯಾಣದಿಂದ ಈ ಪ್ರಶಸ್ತಿ ಪಡೆದ ಏಕೈಕ ಹುಡುಗಿ ಇವರಾಗಿದ್ದಾರೆ.
ರಾಮ್ಪಾಲ್ ಮತ್ತು ರಮಾಮೂರ್ತಿ ದಂಪತಿಗೆ ಡಿಸೆಂಬರ್ 4 ರಂದು ಜನಿಸಿದ ರಾಣಿ, ನಾಲ್ಕನೇ ತರಗತಿಯಲ್ಲಿರುವಾಗಲೇ ಹಾಕಿ ಮೈದಾನಕ್ಕೆ ಪದಾರ್ಪಣೆ ಮಾಡಿ, ಹಾಕಿ ಸ್ಟಿಕ್ ಕೈಗೆತ್ತಿಕೊಂಡಿದ್ದರು. ಅವರ ತಂದೆ ರಾಮ್ಪಾಲ್ ಕುಟುಂಬ ನಿರ್ವಹಣೆಗಾಗಿ ಜಟಕಾ ಬಂಡಿ ಓಡಿಸುತ್ತಿದ್ದರು. ಅವರು ಸ್ನೇಹಿತರು ಮತ್ತು ಸಂಬಂಧಿಗಳ ವಿರೋಧದ ನಡುವೆಯೂ ತಮ್ಮ ಮಗಳಿಗೆ ಹಾಕಿ ಆಡಲು ಅವಕಾಶ ನೀಡಿದ್ದರು.
ಈಕೆಯ ಪ್ರತಿಭೆ ಕಂಡು ರಾಣಿಯವರನ್ನು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಬಳಿಕ ಅವರು ತಂಡದ ನಾಯಕಿಯಾದರು. ಹಾಕಿ ತಂಡದ ನಾಯಕರಾಗಿ ಅವರು ಪ್ರಸಿದ್ಧಿ ಪಡೆಯುವ ಹೊತ್ತಿಗೆ, ಅವರ ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸಿತು. ರಾಣಿ ರಾಮ್ಪಾಲ್ ಭೀಮ್ ಮತ್ತು ಅರ್ಜುನ್ ಪ್ರಶಸ್ತಿಗಳನ್ನೂ ಸಹ ಪಡೆದಿದ್ದಾರೆ.
ಕುದುರೆ ಗಾಡಿ ಓಡಿಸಿ ಕಠಿಣ ಪರಿಶ್ರಮದಿಂದ ತಮ್ಮ ಕುಟುಂಬವನ್ನು ಸಾಕಿದವರು ರಾಮ್ಪಾಲ್. ಮಗಳು ರಾಣಿ ಹಾಕಿ ಆಟಗಾರ್ತಿಯಾಗಿ ಈ ಸಾಧನೆ ಮಾಡಲು ಅವರ ಪಾತ್ರ ತುಂಬಾ ಹಿರಿದು. ರಾಣಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದಕ್ಕೆ ಅವರಿಗೆ ಬಹಳ ಸಂತೋಷವಾಗಿದ್ದು, ಇಂದು ಇಡೀ ದೇಶವೇ ಮಗಳ ಸಾಧನೆ ಬಗ್ಗೆ ಹೆಮ್ಮೆಪಡುವುದನ್ನು ಕಂಡು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಜಟಕಾ ಗಾಡಿಯನ್ನು ಓಡಿಸುತ್ತಿದ್ದವನ ಮಗಳು, ಅಂತಾರಾಷ್ಟ್ರೀಯ ಹಾಕಿ ಮೈದಾನಕ್ಕೆ ಕಾಲಿಟ್ಟಾಗ ಇಡೀ ರಾಷ್ಟ್ರದಲ್ಲಿ ಹೊಸ ಸಂಚಲನವೊಂದು ಹರಿದಾಡಿದಂತಾಗಿತ್ತು. ಆ ಮೂಲಕ ಆಕೆ ರಾಷ್ಟ್ರದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದರು. ಇಂದು ಅವರು ರಾಷ್ಟ್ರೀಯ ಹಿರಿಯ ಹಾಕಿ ಮಹಿಳಾ ತಂಡದ ನಾಯಕಿಯಾಗಿ ಉತ್ತಮ ಆಟಗಾರರ ತಂಡವನ್ನು ಮುನ್ನಡೆಸುತ್ತಿರುವುದು ದೇಶಕ್ಕೆ ಹೆಮ್ಮಯ ವಿಚಾರ.