ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿಮಾನವನ್ನು ತನ್ನ ವಾಯು ಪ್ರದೇಶದ ಮೇಲೆ ಹಾರಲು ವಿರೋಧಿಸಿದ ಪಾಕ್ ನಿರ್ಧಾರಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ.
ಪಾಕ್ ನಿರ್ಧಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಭಾರತ, ಇಂತಹ ಅನುಮತಿಗಳನ್ನು ಯಾವುದೇ ಸಾಮಾನ್ಯ ದೇಶದಿಂದ ವಾಡಿಕೆಯಂತೆ ನೀಡಲಾಗುತ್ತದೆ. ಹೀಗಾಗಿ ಪಾಕಿಸ್ತಾನವು ಅಂತಾರಾಷ್ಟ್ರೀಯ ವಿಚಾರಗಳಿಂದ ವಿಮುಖಗೊಳ್ಳುವ ಸಾಧ್ಯತೆಗಳಿರುವುದರಿಂದ ತನ್ನ ನಿರ್ಧಾರವನ್ನು ಮತ್ತೆ ಪರಿಶೀಲಿಸುವ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದರೊಂದಿಗೆ ಪಾಕಿಸ್ತಾನಕ್ಕೆ ತಿಳಿಹೇಳಿರುವ ಭಾರತ, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಕಾರಣಗಳನ್ನು ತಪ್ಪಾಗಿ ಬಿಂಬಿಸುವ ತನ್ನ ಹಳೆಯ ಚಾಳಿಯನ್ನು ಪಾಕಿಸ್ತಾನ ಮರುಪರಿಶೀಲಿಸಬೇಕು ಎಂದು ಭಾರತ ಹೇಳಿದೆ.
ಎರಡು ವಾರಗಳಲ್ಲಿ ಎರಡನೇ ಬಾರಿಗೆ ವಿವಿಐಪಿ ವಿಶೇಷ ವಿಮಾನ ಹಾರಾಟಕ್ಕೆ ವಾಯು ಪ್ರದೇಶ ನಿರಾಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಯಾವುದೇ ಸಾಮಾನ್ಯ ದೇಶದಿಂದ ಈ ಅನುಮತಿಯನ್ನು ವಾಡಿಕೆಯಂತೆ ನೀಡಲಾಗುತ್ತದೆ. ಆದರೆ ಪಾಕ್ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಇದು ಪಾಕ್ನ ಅಂತರಾಷ್ಟ್ರೀಯ ಸಂಬಂಧಕ್ಕೆ ಧಕ್ಕೆಯುಂಟುಮಾಡಬಹುದು ಎಂದು ರವೀಶ್ ಕುಮಾರ್ ಹೇಳಿದ್ದಾರೆ.