ನವದೆಹಲಿ: ಒಂದೆಡೆ ಕಳೆದ ಜೂನ್‌ನಲ್ಲಿ ಲಡಾಖ್ ವಲಯದಲ್ಲಿ ಸಂಘರ್ಷ ಉಂಟಾದ ಹಿನ್ನೆಲೆ ಭಾರತ ಮತ್ತು ಚೀನಾ ಮಧ್ಯೆ ಗಡಿಯಲ್ಲಿ ಸೇನಾ ಜಮಾವಣೆಯನ್ನು ಹಿಂಪಡೆಯಲು ಮಾತುಕತೆಗಳು ನಡೆಯುತ್ತಿರುವ ಮಧ್ಯೆಯೇ ಚೀನಾದ ಶಾರ್ಪ್ ಪಾಲಿಸಿಯನ್ನು ಪ್ರತಿರೋಧಿಸಲು ಭಾರತ ಯೋಜನೆ ರೂಪಿಸಿದೆ.
ವರದಿಗಳ ಪ್ರಕಾರ, ಶಿಕ್ಷಣ ಸಚಿವಾಲಯ ಎಂದು ಹೊಸದಾಗಿ ನಾಮಕರಣಗೊಂಡ ಸಚಿವಾಲಯವು ಚೀನಾದ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಅನ್ನು ಸ್ಥಳೀಯ ಭಾರತೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವಗೊಳಿಸುವ ಕುರಿತು ಚಿಂತನೆ ನಡೆಸಿದೆ.
ಚೀನಾದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ಇತರ ದೇಶಗಳ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮಧ್ಯದ ಸಾರ್ವಜನಿಕ ಶೈಕ್ಷಣಿಕ ಪಾಲುದಾರಿಕೆಯೇ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಆಗಿದೆ. ಇದಕ್ಕೆ ಹನ್‌ಬನ್ ಅನುದಾನ ನೀಡುತ್ತದೆ ಮತ್ತು ವ್ಯವಸ್ಥೆ ಮಾಡುತ್ತದೆ. ಈ ಹನ್‌ಬನ್ ಎಂಬುದು ಚೀನಾ ಭಾಷಾ ಕೌನ್ಸಿಲ್ ಇಂಟರ್‌ನ್ಯಾಷನಲ್ ಆಫೀಸ್‌ನ ಅಧಿಕೃತ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಚೀನಾದ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.
ಈ ಯೋಜನೆಯ ಉದ್ದೇಶವು ಚೀನಾದ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು, ಸ್ಥಳೀಯ ಚೀನಾ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೋಧಿಸುವುದು ಮತ್ತು ಸಾಂಸ್ಕೃತಿಕ ವಿನಿಮಯ ಮಾಡುವುದಾಗಿದೆ. ಈ ಸಂಸ್ಥೆ ಕಾರ್ಯನಿರ್ವಹಣೆ ಮಾಡುವ ದೇಶಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಆತಂಕದ ಹಿನ್ನೆಲೆ ವಿಪರೀತ ಟೀಕೆ ಕೇಳಿಬಂದಿದೆ.
ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್‌ನ ಕಾರ್ಯಾರಂಭ 2004ರಲ್ಲಿ ಆರಂಭವಾಯಿತು ಮತ್ತು ಪ್ರತ್ಯೇಕ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಹನ್‌ಬನ್ ಮೇಲ್ವಿಚಾರಣೆಯಲ್ಲಿ ಇದು ನಡೆಯುತ್ತಿದೆ. ವಿಶ್ವದ ವಿವಿಧೆಡೆಯಲ್ಲಿರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಹಕಾರದಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ ಮತ್ತು ಈ ಯೋಜನೆಗೆ ಹಣಕಾಸನ್ನು ಹನ್‌ಬನ್ ಮತ್ತು ಸ್ಥಳೀಯ ಸಂಸ್ಥೆಗಳು ಭರಿಸುತ್ತವೆ.
ಇತರ ದೇಶಗಳಲ್ಲಿ ತನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಫ್ರಾನ್ಸ್‌ನ ಅಲಾಯನ್ಸ್ ಫ್ರಾಂಕಾಯ್ಸ್ ಮತ್ತು ಜರ್ಮನಿಯ ಗೊಯೆತೆ ಇನ್‌ಸ್ಟಿಟ್ಯೂಟ್ ರೀತಿಯಲ್ಲಿ ಈ ಯೋಜನೆಯನ್ನು ಪ್ರಚಾರಪಡಿಸಲು ಚೀನಾ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಅನ್ನು ಪ್ರಚಾರಪಡಿಸುತ್ತಿದೆ. ಆದರೆ, ಇತರೆ ದೇಶಗಳಲ್ಲಿ ಅಲಾಯನ್ಸ್ ಫ್ರಾಂಕಾಯ್ಸ್ ಮತ್ತು ಗೊಯೆತೆ ಇನ್‌ಸ್ಟಿಟ್ಯೂಟ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಬದಲಿಗೆ, ಚೀನಾ ಸರ್ಕಾರ ಅನುದಾನ ನೀಡಿದರೂ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಬಯಸುತ್ತದೆ.
ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಎಂಬುದು ಬೀಜಿಂಗ್ ಹಮ್ಮಿಕೊಂಡಿರುವ ವಸಾಹತು ಯೋಜನೆಯ ಒಂದು ಭಾಗ ಎಂದು ಪರಿಣಿತರು ಹೇಳುತ್ತಾರೆ.
ಇದನ್ನು ಶಾರ್ಪ್ ಪವರ್ ಎಂದು ಕರೆಯಲಾಗಿದೆ. ಇದನ್ನು ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಮತ್ತು ಅದರ ಮೇಲೆ ಪ್ರಭಾವ ಬೀರುವ ಉದ್ದೇಶದ ರಾಜತಾಂತ್ರಿಕ ನೀತಿ ಎಂದು ವ್ಯಾಖ್ಯಾನಿಸಲಾಗಿದೆ.
ಅಧಿಕಾರಯುತ ಸರ್ಕಾರಗಳು ಅಳವಡಿಸಿಕೊಂಡ ವ್ಯಾಘ್ರ ಮತ್ತು ವಿಧ್ವಂಸಕ ನೀತಿಗಳನ್ನು ವ್ಯಾಖ್ಯಾನಿಸಲು ಅಮೆರಿಕದ ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿಯು ಈ ಪದಗುಚ್ಛವನ್ನು ರೂಪಿಸಿದೆ. ಸಾಮಾನ್ಯವಾಗಿ ಪ್ರಜಾಪ್ರಭುತ್ವ ಸರ್ಕಾರಗಳನ್ನು ಸಾಫ್ಟ್ ಪವರ್ ಎಂದೂ ಸರ್ವಾಧಿಕಾರ ಸರ್ಕಾರಗಳನ್ನು ಹಾರ್ಡ್ ಪವರ್ ಎಂದೂ ಕರೆಯಲಾಗುತ್ತದೆ.
ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್ ಶಾಖೆಗಳನ್ನು ಸ್ಥಾಪಿಸಲು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಚೀನಾದ ಸಂಸ್ಥೆಗಳ ಮಧ್ಯೆ ಮಾಡಿಕೊಂಡ ಒಪ್ಪಂದಗಳನ್ನು ಮರುಪರಿಶೀಲನೆ ಮಾಡಲು ಭಾರತೀಯ ಶಿಕ್ಷಣ ಸಚಿವಾಲಯ ಯೋಜನೆ ರೂಪಿಸಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಚೈನೀಸ್ ಮತ್ತು ಆಗ್ನೇಯ ಏಷ್ಯಾದ ಅಧ್ಯಯನಗಳ ಕೇಂದ್ರದ ಚೇರ್ಮನ್ ಬಿ.ಆರ್.ದೀಪಕ್, ಇತರ ದೇಶಗಳ ಉದಾರವಾದಿ ಸಿದ್ಧಾಂತವನ್ನು ಪ್ರಲೋಭಿಸಲು ಬೀಜಿಂಗ್ ಈ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಜೆಎನ್‌ಯು ಮತ್ತು ಪೆಕಿಂಗ್ ವಿವಿಯ ಸಹಭಾಗಿತ್ವದಲ್ಲಿ ಇಂತಹ ಸಂಸ್ಥೆಯನ್ನು ಸ್ಥಾಪಿಸಲು 2005ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದು 5 ವರ್ಷಗಳ ನಂತರ ರದ್ದಾಗಿದೆ.
ಈ ಒಪ್ಪಂದವನ್ನು ಪುನಃ ಮಾಡಿಕೊಳ್ಳಲು ಪೆಕಿಂಗ್ ವಿಶ್ವವಿದ್ಯಾಲಯ ಬಲವಂತ ಮಾಡುತ್ತಿದೆಯಾದರೂ, ತಾನು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಇಂತಹ ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಜೆಎನ್‌ಯು ವಿವರಿಸಿದೆ.
“ಇಂತಹ ಸಂಸ್ಥೆಯನ್ನು ಸ್ಥಾಪಿಸಲು ಆಸಕ್ತಿ ಹೊಂದಿಲ್ಲ ಎಂಬುದಾಗಿ ಹನ್‌ಬನ್ ಮತ್ತು ಚೀನಾ ರಾಯಭಾರ ಕಚೇರಿಗೆ (ನವದೆಹಲಿಯಲ್ಲಿರುವ) ಜೆಎನ್‌ಯು ಅಧಿಕೃತವಾಗಿ ಸಂವಹನ ನಡೆಸಿದೆ” ಎಂದು ದೀಪಕ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಭಾರತದ ಶಿಕ್ಷಣ ಸಚಿವಾಲಯವು ಮುಂಬೈ ವಿವಿ, ವೆಲ್ಲೋರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲವ್ಲೀ ಪ್ರೊಫೆಷನಲ್ ಯೂನಿವರ್ಸಿಟಿ, ಜಲಂಧರ್, ಒ.ಪಿ.ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿ, ಸೋನೆಪತ್, ಸ್ಕೂಲ್ ಆಫ್ ಚೈನೀಸ್ ಲ್ಯಾಂಗ್ವೇಕ್, ಕೋಲ್ಕತಾ, ಭಾರತಿಯಾರ್ ಯೂನಿವರ್ಸಿಟಿ, ಕೊಯಮತ್ತೂರು ಮತ್ತು ಕೆ.ಆರ್ ಮಂಗಲಂ ಯೂನಿವರ್ಸಿಟಿ ಗುರುಗ್ರಾಮ್‌ನಲ್ಲಿ ಸ್ಥಾಪಿಸಲಾದ ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್‌ಗಳ ಬಗ್ಗೆ ಮರುಪರಿಶೀಲನೆ ಮಾಡುತ್ತಿದೆ.
ಖಾಸಗಿ ಮತ್ತು ಕೇಂದ್ರೀಯ ವಿವಿಗಳಲ್ಲಿ ಸ್ಥಾಪಿಸಲಾಗುವ ಇಂತಹ ಚೀನಾ ಸಂಸ್ಥೆಗಳಿಗೆ ಅನುಮತಿ ನೀಡುವಲ್ಲಿ ಎರಡು ಮಾನದಂಡಗಳನ್ನು ಹೊಂದಬಾರದು ಎಂದು ಯುಜಿಸಿ ಗಮನಕ್ಕೆ ಜೆಎನ್‌ಯು ತಂದಿದೆ.
“ಈಗ ಶಿಕ್ಷಣ ಸಚಿವಾಲಯವು ಈ ವಿಚಾರವನ್ನು ಗಮನಿಸುತ್ತಿದೆ. ಈ ವಿಚಾರದಲ್ಲಿ ಸಮಾನವಾದ ನೀತಿ ಇರಬೇಕು.” ಎಂದು ದೀಪಕ್ ಹೇಳಿದ್ದಾರೆ.
ವಿಶ್ವಾದ್ಯಂತ 500ಕ್ಕೂ ಹೆಚ್ಚು ಕನ್‌ಫುಸಿಯಸ್ ಇನ್‌ಸ್ಟಿಟ್ಯೂಟ್‌ಗಳಿವೆ. ಈ ಪೈಕಿ ಅಮೆರಿಕದಲ್ಲೇ 100ಕ್ಕೂ ಹೆಚ್ಚು ಇವೆ. ಆದರೆ, ಈ ಸಂಸ್ಥೆಗಳು ಹೆಸರು ಕೆಡಿಸಿಕೊಂಡಿವೆ. ತನ್ನ ಶಾರ್ಪ್ ಪವರ್ ಪಾಲಿಸಿಗಳನ್ನು ಜಾರಿಗೊಳಿಸಲು ಚೀನಾ ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
“ಈ ಸಂಸ್ಥೆಗಳನ್ನು ಸಣ್ಣ ದೇಶಗಳಾದ ಶ್ರೀಲಂಕಾ ಮತ್ತು ನೇಪಾಳ, ಕೇಂದ್ರೀಯ ಏಷ್ಯಾ ಮತ್ತು ಬಲ್ಕನ್ ದೇಶಗಳಲ್ಲಿ ಸ್ಥಾಪಿಸಲಾಗಿದೆ. ಏಕೆಂದರೆ, ಈ ಸಂಸ್ಥೆಗಳು ಉದ್ಯೋಗ ಅವಕಾಶಗಳನ್ನೂ ಒದಗಿಸುತ್ತವೆ” ಎಂದು ದೀಪಕ್ ಹೇಳಿದ್ದಾರೆ.
“ಚೀನಾ ಸರ್ಕಾರದ ಪ್ರಕಾರ, ನಿಮ್ಮನ್ನು ಕನ್‌ಫ್ಯುಸಿಯಸ್ ಇನ್‌ಸ್ಟಿಟ್ಯೂಟ್‌ಗಳು ಶಿಫಾರಸು ಮಾಡಿದರೆ ಮಾತ್ರ ಚೀನಾ ವಿಶ್ವವಿದ್ಯಾಲಯಗಳಲ್ಲಿ ನಿಮಗೆ ವಿದ್ಯಾರ್ಥಿವೇತನ ಸಿಗುತ್ತದೆ. ವಿವಿಧ ವಲಯದಲ್ಲಿ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತವಾದರೂ, ಹೆಚ್ಚಿನದಾಗಿ ಚೀನಾ ಭಾಷೆ ಅಧ್ಯಯನಕ್ಕೆ ವಿದ್ಯಾರ್ಥಿ ವೇತನ ನೀಡುತ್ತವೆ” ಎಂದು ದೀಪಕ್ ಹೇಳುತ್ತಾರೆ.
ಆಫ್ರಿಕಾದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿರುವುದರಿಂದ ಈ ಭಾಗದಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಚೀನಾದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. “ಈಗ ಭಾರತವು ಶಾರ್ಪ್ ಪಾಲಿಸಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ವಿಶೇಷ ಬರಹ: ಅರೂಣಿಮ್ ಭುಯಾನ್