ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್ ಹೇರಿ ಕಠಿಣ ಕ್ರಮಗಳನ್ನು ಕೈಗೊಂಡಿದ್ರೂ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುಗತಿಯಲ್ಲಿದೆ. ಮೇ ತಿಂಗಳ ಪ್ರಾರಂಭದಲ್ಲಿ ಒಂದೇ ದಿನ 2,400 ಮಂದಿಗೆ ಸೋಂಕು ದೃಢಪಟ್ಟಿತ್ತು. ನಂತರ ಆ ಸಂಖ್ಯೆ 3 ಸಾವಿರಕ್ಕೆ ಬಂದು ನಿಂತಿತು. ಕಳೆದೊಂದು ವಾರದಲ್ಲಿ 5 ರಿಂದ 6 ಸಾವಿರ ಪ್ರಕರಣಗಳು (ಮೇ 19ರವರೆಗೆ) ಪತ್ತೆಯಾಗಿವೆ. ಪ್ರಸ್ತುತ ಕಳೆದ 24 ಗಂಟೆಗಳಲ್ಲಿ 6,654 ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಂದೇ ದಿನದಲ್ಲಿ ದಾಖಲಾಗಿರುವ ಗರಿಷ್ಠ ಸಂಖ್ಯೆ ಇದಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,25,101ಕ್ಕೆ ಬಂದು ನಿಂತಿದೆ. 3,720 ಮಂದಿ ಸಾವನ್ನಪ್ಪಿದ್ದಾರೆ.
ವಿದೇಶಗಳಲ್ಲಿ ಕೊರೊನಾ ಆಡಿದ್ದೇ ಆಟ
ಇತರ ದೇಶಗಳನ್ನು ಗಮನಿಸಿದರೆ, ಪ್ರತಿದಿನ ಹೊಸ ಪ್ರಕರಣಗಳು ದಾಖಲಾಗುತ್ತಿರುವ ವಿಷಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಅಗ್ರಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇಲ್ಲಿ ದಿನವೊಂದಕ್ಕೆ 20 ಸಾವಿರ ಮಂದಿಗೆ ಸೋಂಕು ದೃಢಪಡುತ್ತಿದೆ. ಒಟ್ಟು ಸಾವಿನ ಸಂಖ್ಯೆ 16.32 ಲಕ್ಷಕ್ಕೆ ಏರಿದೆ. ಬ್ರೆಜಿಲ್ನಲ್ಲೂ ಸೋಂಕಿತರ ಸಂಖ್ಯೆ ಏರುಗತ್ತಿಯಲ್ಲೇ ಇದೆ. ಅಗ್ರಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಒಂದೇ ವಾರದಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ವೈರಸ್ ತಗುಲಿದೆ. ರಷ್ಯಾದಲ್ಲಿ 8 ಸಾವಿರ ವರೆಗೆ ಹೊಸ ಪ್ರಕರಣಗಳು ದಾಖಲಾಗಿವೆ.
ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಇದೂ ಒಂದು ಕಾರಣ..
ದೇಶದಲ್ಲಿ ಆರಂಭದ ದಿನಗಳಲ್ಲಿ ಪರೀಕ್ಷೆಗೊಳಪಡಿಸುವವರ ಪ್ರಮಾಣ ತೀರಾ ಕಡಿಮೆ ಇತ್ತು. ಇದೀಗ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗಿದೆ. ಇಂದು ಒಂದೇ ದಿನ 1 ಲಕ್ಷ ಜನರಿಗೆ ಕೋವಿಡ್-19 ಪರೀಕ್ಷೆ ಮಾಡಿರುವುದಾಗಿ ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಆರ್) ತಿಳಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ನಿನ್ನೆಯಷ್ಟೇ ಐಎಂಆರ್ ಹೇಳಿತ್ತು. ಮೇ 10ರವರೆಗೆ 10 ಲಕ್ಷ, ಮೇ 22 ರವರೆಗೆ 27.55 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಿಂದಾಗಿ ಸೋಂಕು ದೃಢ ಪಟ್ಟವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ನಿಟ್ಟುಸಿರುವ ಬಿಡುವಂತ ವಿಷ್ಯ
ದೇಶದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 1.25 ಲಕ್ಷಕ್ಕೆ ಏರಿಕೆಯಾಗಿದೆ. ಆದ್ರೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುತ್ತಿರುವವರ ಪ್ರಮಾಣ ಗಣನೀಯವಾಗಿ ಹೆಚ್ಚಿರುವುದು ಗಮನಾರ್ಹವಾಗಿದೆ. ಸದ್ಯಕ್ಕೆ ಸೋಂಕಿನಿಂದ ಬಿಡುಗಡೆಯಾಗುತ್ತಿರುವವರ ಪ್ರಮಾಣ 41.39 ರಷ್ಟಿದೆ. ಇಂದು ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ 51,783 ಮಂದಿ ಗುಣಮುಖರಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. 69,597 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1.25 ಲಕ್ಷ ಪ್ರಕರಣಗಳು ದಾಖಲಾಗಲು ಭಾರತ 115 ದಿನಗಳನ್ನು ತೆಗೆದುಕೊಂಡಿದೆ. ಬ್ರಿಟನ್ 53, ಅಮೆರಿಕ 69 ಹಾಗೂ ರಷ್ಯಾಗೆ 93 ದಿನಗಳು ಹಿಡಿದಿವೆ
ನಾವು ಏನು ಮಾಡಬೇಕು?
ಬರೋಬ್ಬರಿ 2 ತಿಂಗಳ ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಕೆಲ ಮಾರ್ಗ ಸೂಚಿಗಳೊಂದಿಗೆ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಮೇ 31ರ ನಂತರ ಮತ್ತಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಆದ್ರೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಮುಂದಿರುವ ಮಾರ್ಗವಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮೂಲಕ ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರ ಸಡಿಲಿಕೆ ನೀಡಿದೆ ಅಂತ ತಮ್ಮಿಷ್ಟದಂತೆ ನಡೆದುಕೊಂಡರೆ ಮತ್ತಷ್ಟು ಅನಾಹುತದ ಸಾಧ್ಯತೆ ಇದೆ.