ನವದೆಹಲಿ: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ಹೋಲಿಸಿದ್ರೆ ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಆರೋಗ್ಯ ಸಚಿವಾಲಯದ ಸಮೀಕ್ಷೆಯ ಪ್ರಕಾರ, ಭಾರತವು ಕಡಿಮೆ ಪ್ರಮಾಣದ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿವೆ. ನಾಲ್ಕು ದಿನಗಳಲ್ಲಿ ಭಾರತವು 750-1500 ಪ್ರಕರಣಗಳನ್ನು ದಾಖಲಿಸಿದೆ. ಆದರೆ, ಅಮೆರಿಕಾ ಮತ್ತು ಇಟಲಿಗೆ ತಲಾ ಎರಡು ದಿನಗಳು, ಯುಕೆ, ಫ್ರಾನ್ಸ್ ಮತ್ತು ಜರ್ಮನಿಗೆ ತಲಾ ಮೂರು ದಿನಗಳು ಬೇಕಾಯಿತು. ಕೊರೊನಾ ವೈರಸ್ ಹೋಗಲಾಡಿಸಲು ಭಾರತವು ಪೂರ್ವಭಾವಿ ವಿಧಾನವನ್ನು ಅನುಸರಿಸುತ್ತಿದ್ದು, ಇದರಿಂದಾಗಿ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂದು ಆರೋಗ್ಯ ರಕ್ಷಣಾ ಪೂರೈಕೆದಾರರ ಸಂಘದ ನಿರ್ದೇಶಕ ಡಾ. ಗಿರಿಧರ್ ಗಯಾನಿ ತಿಳಿಸಿದ್ದಾರೆ.
ಭಾರತವು 10,000 ಪ್ರಕರಣಗಳನ್ನ ದಾಟಿದಾಗ ಇಲ್ಲಿ 2,17,554 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ರೆ, ಅಮೆರಿಕಾ 1,39,878 ಪರೀಕ್ಷೆಗಳು, ಯುಕೆ 1,13, 777, ಇಟಲಿ 7,31,554 ಪರೀಕ್ಷೆಗಳನ್ನು ನಡೆಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವರದಿಯ ಪ್ರಕಾರ, ಭಾರತವು ಒಂದು ಮಿಲಿಯನ್ ಜನಸಂಖ್ಯೆಗೆ ಒಂಬತ್ತು ಪ್ರಕರಣಗಳನ್ನ ದಾಖಲಿಸಿದ್ರೆ, ಸ್ಪೇನ್ ಒಂದು ಮಿಲಿಯನ್ ಜನಸಂಖ್ಯೆಗೆ 3,864 ಪ್ರಕರಣ ದಾಖಲಿಸಿದೆ. ಅದೇ ರೀತಿ ಇಟಲಿಯಲ್ಲಿ 2,732, ಫ್ರಾನ್ಸ್ 2,265, ಯುಎಸ್ಎ 1,946, ಜರ್ಮನಿ 1,608, ಯುಕೆ 1,451, ಕೆನಡಾ 752, ಆಸ್ಟ್ರೇಲಿಯಾ 253 ಮತ್ತು ದಕ್ಷಿಣ ಕೊರಿಯಾದಲ್ಲಿ ಒಂದು ಮಿಲಿಯನ್ ಜನಸಂಖ್ಯೆಗೆ 207 ಪ್ರಕರಣಗಳು ದಾಖಲಾಗಿವೆ.
ಸಾವಿನ ಪ್ರಮಾಣದಲ್ಲೂ ಸಹ ಭಾರತವು ಒಂದು ಮಿಲಿಯನ್ ಜನಸಂಖ್ಯೆಗೆ ವಿಶ್ವದ 17.3 ಸಾವಿನ ಪ್ರಮಾಣಕ್ಕೆ ಹೋಲಿಸಿದರೆ 1 ಮಿಲಿಯನ್ ಜನಸಂಖ್ಯೆಗೆ 0.3 ಸಾವಿನೊಂದಿಗೆ ಕಡಿಮೆ ಸಂಖ್ಯೆಯನ್ನು ದಾಖಲಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಗುರುವಾರ 12,380 ಸಕಾರಾತ್ಮಕ ಪ್ರಕರಣಗಳನ್ನ ದಾಖಲಿಸಿದೆ. ಇದರಲ್ಲಿ 10,477 ಸಕ್ರಿಯ ಪ್ರಕರಣಗಳು, 1488 ಗುಣಮುಖವಾಗಿವೆ. 414 ಜನರು ಸಾವನ್ನಪ್ಪಿದ್ದಾರೆ.