ನವದೆಹಲಿ: ಭಾರತದಲ್ಲಿ ಮಾರಣಾಂತಿಕ ಕೊರೊನಾ ಹಾವಳಿ ಹೆಚ್ಚಾಗಿದ್ದು, ಇದೀಗ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಇನ್ನೊಂದೆಡೆ ಚೇತರಿಕೆಯ ಪ್ರಮಾಣ ಕೂಡ ಶೇ.58.14ಕ್ಕೆ ಹೆಚ್ಚಳವಾಗಿದೆ.
ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 18,552 ಕೇಸ್ಗಳು ಪತ್ತೆಯಾಗಿದ್ದು, 384 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 5,08,953ಕ್ಕೆ ಹಾಗೂ ಮೃತರ ಸಂಖ್ಯೆ 15,685ಕ್ಕೆ ಏರಿಕೆಯಾಗಿದೆ.
ಕೋವಿಡ್ ಕೇಸ್ಗಳ ಹಾಗೂ ಸಾವಿನ ಸಂಖ್ಯೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ ಸೋಂಕಿತರಿದ್ದಾರೆ. ಇಲ್ಲಿ ನಿನ್ನೆ ಒಂದೇ ದಿನ 5024 ಸಾವಿರ ಮಂದಿಗೆ ವೈರಸ್ ತಗುಲಿದ್ದು, 174 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,52,765ಕ್ಕೆ ಹಾಗೂ ಸಾವಿನ ಸಂಖ್ಯೆ 7,106ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಚೇತರಿಕೆಯ ಪ್ರಮಾಣದಲ್ಲಿ ಕೂಡ ಗಣನೀಯ ಏರಿಕೆ ಕಂಡು ಬಂದಿದ್ದು, ಶೇ.58.14 ರಷ್ಟು ಅಂದರೆ 2,95,881 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 1,97, 387 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.