ನವದೆಹಲಿ : ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆಯುತ್ತಿದೆ. ಈ ಮಧ್ಯೆ ಪರಿಸ್ಥಿತಿ ತಿಳಿಗೊಳಿಸಲು ಅಕ್ಟೋಬರ್ 12ರಂದು ಭಾರತ ಹಾಗೂ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ನಡೆಸಲು ನಿರ್ಧರಿಸಿವೆ.
ಈಗಾಗಲೇ ಆರು ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದು 7ನೇ ಸುತ್ತಿನ ಸಭೆಯಾಗಲಿದೆ. ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2 ಹಾಗೂ ಸೆಪ್ಟೆಂಬರ್ 21 ರಂದು ಸಭೆಗಳು ನಡೆದಿದ್ದವು.
ಕಳೆದ ಬಾರಿ ಅಂದರೆ ಸೆ.21 ರಂದು ಪೂರ್ವ ಲಡಾಖ್ನ ಮೋಲ್ಡೋದಲ್ಲಿ ನಡೆದಿದ್ದ 6ನೇ ಸುತ್ತಿನ ಸಭೆಯಲ್ಲಿ ಉಭಯ ದೇಶಗಳ ಅಧಿಕಾರಿಗಳು ಸುಮಾರು 13 ಗಂಟೆ ಕಾಲ ಮಾತುಕತೆ ನಡೆಸಿದ್ದರು.
ಗಡಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೂರ್ವ ಲಡಾಖ್ ವಲಯದಲ್ಲಿ ಅ.12 ರಂದು ಮಾತುಕತೆ ನಡೆಯಲಿದೆ. ಎರಡೂ ರಾಷ್ಟ್ರಗಳ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.