ಅಮೃತಸರ(ಪಂಜಾಬ್): ನಮ್ಮ ಭದ್ರತಾ ಪಡೆಗಳು ಜಾಗೃಕವಾಗಿವೆ. ನಮ್ಮ ಗಡಿಗಳು ಸುರಕ್ಷಿತವಾಗಿವೆ ಎಂದು ದೇಶಕ್ಕೆ ಭರವಸೆ ನೀಡುತ್ತೇವೆ ಎಂದು ಬಿಎಸ್‌ಎಫ್ ಮತ್ತು ಐಟಿಬಿಪಿಯ ಮಹಾ ನಿರ್ದೇಶಕ ಎಸ್.ಎಸ್. ದೇಸ್ವಾಲ್ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ತಿಳಿಸಿದರು.
74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ಭದ್ರತಾ ಸಿಬ್ಬಂದಿ, ಅವರ ಕುಟುಂಬಗಳಿಗೆ ಹಾಗೂ ರಾಷ್ಟ್ರಕ್ಕೆ ಶುಭಾಶಯ ಕೋರಿದರು. ಇದೇ ವೇಳೆ ಕರ್ತವ್ಯದ ಸಮಯದಲ್ಲಿ ಮರಣ ಹೊಂದಿದವರ ತ್ಯಾಗವನ್ನು ಸ್ಮರಿಸಿದರು.
"ಭಾರತವು ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ಎಲ್ಲಾ ಶಕ್ತಿಯನ್ನು ಹೊಂದಿರುವ ಶಾಂತಿ ಪ್ರಿಯ ರಾಷ್ಟ್ರವಾಗಿದೆ. ಗಡಿಗಳಲ್ಲಿರುವ ನಮ್ಮ ಭದ್ರತಾ ಪಡೆಗಳು ಸಂಪೂರ್ಣ ಬಲದಿಂದ ಎಚ್ಚರವಾಗಿರುತ್ತವೆ. ನಮ್ಮ ಗಡಿಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ನಾವು ರಾಷ್ಟ್ರಕ್ಕೆ ಭರವಸೆ ನೀಡುತ್ತೇವೆ" ಎಂದು ದೇಸ್ವಾಲ್ ಹೇಳಿದರು.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಶ್ಲಾಘಿಸಿದರು. ಅಲ್ಲದೆ ಪಾಕಿಸ್ತಾನದ ಯಾವುದೇ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ನೆರೆಯ ದೇಶಕ್ಕೆ ಎಚ್ಚರಿಕೆ ನೀಡಿದರು.