ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಆಗಿ ಭಾರತೀಯ ಲೆಕ್ಕಪರಿಶೋಧಕ ಅಧಿಕಾರಿ ಇನಾಬತ್ ಖಲೀಕ್ ಅಧಿಕಾರ ವಹಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಖಲೀಕ್ ಅವರ ಪಾಲಾಗಿದೆ. 2018ರ ಬ್ಯಾಚ್ ಐಎ & ಎಎಸ್ ಅಧಿಕಾರಿ ಖಲೀಕ್ ಅವರು ಶ್ರೀನಗರದ ಮಲಿನ್ಸನ್ ಬಾಲಕಿಯರ ಶಾಲೆಯಿಂದ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಎಐಇಇಇಗೆ ಅರ್ಹತೆ ಪಡೆದಿದ್ದರೂ, ಖಲೀಕ್ ಅವರು ರಾಜ್ಯ - ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ನಿರ್ಧರಿಸಿದರು.
ಇನ್ನು ಇವರ ತಂದೆ ಪ್ರಸಿದ್ಧ ಸಂದಿವಾತದ ವೈದ್ಯರಾಗಿದ್ದರೆ, ತಾಯಿ ಶಾಲಾ ಶಿಕ್ಷಕಿ. ಇವರೇ ತಮ್ಮ ಮಗಳು ಯುಪಿಎಸ್ಸಿ ಪರೀಕ್ಷೆ ಬರೆಯಲು ಪ್ರೇರಕರಾಗಿದ್ದಾರೆ. ಈ ಮೊದಲು 2016 ಮತ್ತು 2017ರ ಕೇಂದ್ರ ಲೋಕಸೇವಾ ಪರೀಕ್ಷೆಗಳಲ್ಲಿ ಅವರು ಅರ್ಹತೆ ಪಡೆದುಕೊಂಡಿದ್ದರು. ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಅವರು 605ನೇ ರ‍್ಯಾಂಕ್ ಪಡೆದುಕೊಂಡಿದ್ದರು.
ಇವರು ಎರಡನೇ ಪ್ರಯತ್ನದಲ್ಲಿ ತಮ್ಮ ರ‍್ಯಾಂಕ್ ಸುಧಾರಿಸಿಕೊಂಡು 378ಕ್ಕೆ ಜಿಗಿದಿದ್ದರು. ಈ ಸಂದರ್ಭದಲ್ಲಿ ಅವರು ಅಂತಿಮವಾಗಿ ಖಲೀಕ್ ಐಎ ಮತ್ತು ಎಎಸ್ ಹುದ್ದೆ ಆಯ್ಕೆ ಮಾಡಿಕೊಂಡಿದ್ದರು. ಪರೀಕ್ಷೆ ಪಾಸಾದ ಬಳಿಕ ಅವರು, ಶಿಮ್ಲಾದ ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಅಂಡ್ ಅಕೌಂಟ್ಸ್‌ನಲ್ಲಿ ತರಬೇತಿ ಪಡೆದರು. ಇದೀಗ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.