ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿರುವ ಆರೋಪ ಹೊತ್ತಿರುವ ಐಎಂಎ ಗೋಲ್ಡ್ ಕಂಪನಿಯ ಮುಖ್ಯಸ್ಥ ಮನ್ಸೂರ್ ಅಹಮದ್ ತಾನು ಎಲ್ಲೂ ಓಡಿಹೋಗಿಲ್ಲ ಎಂದು ಹಾಗೂ ಕೆಲ ರಾಜಕಾರಣಿಗಳ ಹೆಸರು ಹೇಳಿ ರೆಕಾರ್ಡ್ ಮಾಡಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.
ಹೌದು.., ಐಎಂಎ ವಂಚನೆ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಮಾಲೀಕ ದೂರದ ದುಬೈನಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದು, ರಾಜಕಾರಣಿಗಳು ಹಾಗೂ ಉದ್ಯಮಿಗಳು, ಮೌಲ್ವಿಗಳು ಸೇರಿದಂತೆ ಪಟ್ಟಿ ಸಿದ್ದಪಡಿಸಿಕೊಂಡು ಬೆಂಗಳೂರಿಗೆ ಆಗಮಿಸುವುದಾಗಿ ಹೇಳುವ ಮೂಲಕ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಅನೇಕರಿಗೆ ನಡುಕ ಹುಟ್ಟಿಸಿದ್ದಾನೆ. ಅಲ್ಲದೇ ಈ ಪ್ರಕರಣದಲ್ಲಿ ಕೆಲ ರಾಜಕಾರಣಿಗಳ ಹೆಸರು ಹೇಳಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಕೂಡ ಆಡಿಯೊ ಮಾಡಿ ಬಿಡುಗಡೆ ಮಾಡಿದ್ದ, ಆದರೆ ಅದನ್ನು ನಕಲಿ ಎಂದು ಭಾವಿಸಲಾಗಿತ್ತು.
ವಿಡಿಯೋದಲ್ಲಿರುವ ವಿವರ:
ಈ ವಿಡಿಯೋದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್ ಖಾನ್, ವಿಧಾನ ಪರಿಷತ್ ಸದಸ್ಯ ಟಿ.ಶರವಣ ಸೇರಿದಂತೆ ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರುಗಳನ್ನು ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ.
ನನ್ನ ಕಪ್ಪು ಹಾಗೂ ಬಿಳಿ ಹಣವನ್ನು ಜನರ ಮುಂದೆ ಇಡುತ್ತೇನೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ತಿಂಗಳು 14 ರಂದು ಭಾರತಕ್ಕೆ ಬರಲು ಪ್ರಯತ್ನಿಸಿದ್ದೆ. ಇಮಿಗ್ರೇಷನ್ ಇಲಾಖೆಯು ನನ್ನ ಪಾಸ್ಪೋರ್ಟ್ ರದ್ದು ಮಾಡಿದ್ದರಿಂದ ಭಾರತಕ್ಕೆ ಬರಲು ಹಿನ್ನೆಡೆಯಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಂಪೆನಿ ವಿರುದ್ದ ವ್ಯವಸ್ಥಿತವಾಗಿ ಪಿತೂರಿ ನಡೆಸಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ಕೆಲ ರಾಜಕಾರಣಿಗಳು ನನ್ನ ಜೀವನಕ್ಕೆ ಕುತ್ತು ತಂದಿದ್ದಾರೆ. ನನ್ನ ಬಳಿ 1,350 ಕೋಟಿ ಆಸ್ತಿ ಇದೆ. ಜನರ ದುಡ್ಡನ್ನು ವಾಪಸ್ ಕೊಡುತ್ತೇನೆ. ನನ್ನ ಬಳಿ ಪ್ರತಿಯೊಬ್ಬರಿಗೂ ನೀಡಿದ ಹಣದ ಲಿಸ್ಟ್ ಇದೆ. ಪ್ರಕರಣದ ತನಿಖಾಧಿಕಾರಿ ಮುಂದೆ ಎಲ್ಲವನ್ನು ಇಡುತ್ತೇನೆ ಎಂದಿದ್ದಾರೆ.
ನಾನು ಎಲ್ಲೂ ಓಡಿಹೋಗಿಲ್ಲ. ಐಎಂಎ ಒಂದು ಎಸ್ಟ್ಯಾಬ್ಲಿಷ್ ಆಗಿರುವ ಕಂಪನಿ, ಇಲ್ಲಿ ವಂಚನೆಯ ಪ್ರಶ್ನೆ ಇಲ್ಲ. ಕಂಪನಿಯು ಲಾಭದಲ್ಲಿದ್ದಾಗ ಎಲ್ಲರಿಗೂ ಸರಿಯಾಗಿ ಬಡ್ಡಿ ಹಣ ನೀಡಲಾಗುತ್ತಿತ್ತು. ಆದರೆ, ಒಂದೆರಡು ತಿಂಗಳು ಕಂಪನಿ ನಷ್ಟವಾದಾಗ ಹಣ ಕೊಡಲಾಗಿಲ್ಲ. ಅಷ್ಟಕ್ಕೆ ಹೂಡಿಕೆದಾರರು ಗೂಂಡಾಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಲು ಶುರು ಮಾಡಿದರು. ನನ್ನ ಬಾಯಿ ಮುಚ್ಚಿಸಲು ಎಲ್ಲಾ ರೀತಿಯ ತಂತ್ರ ನಡೆದಿದೆ, ಇದರಿಂದಲೇ ದುಬೈ ಹೋಗಿದ್ದೆ. ಇದೀಗ ಮಾನಸಿಕ ಸ್ಥಿತಿ ಚೆನ್ನಾಗಿದೆ, ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆ. ಎಲ್ಲವನ್ನು ನಿಮ್ಮ ಮುಂದೆ ತಿಳಿಸುತ್ತೇನೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ಗೆ ಅಡ್ರೆಸ್ ಮಾಡಿ ಮೊಬೈಲ್ ನಂಬರ್ ಸಮೇತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಕಂಪನಿ ಆರಂಭವಾದ 13 ವರ್ಷಗಳಲ್ಲಿ ಜನರಿಗೆ 12 ಸಾವಿರ ಕೋಟಿ ಲಾಭಾಂಶ ನೀಡಿದೆ. ನನ್ನ ಬಳಿ 500 ಕೋಟಿ ಸ್ಥಿರಾಸ್ತಿ ಇದೆ, ಹೂಡಿಕೆದಾರರಿಗೆ ಹಣ ನೀಡುತ್ತೇನೆ, ಆತಂಕಬೇಡ ಎಂದು ಮನ್ಸೂರ್ ಸ್ಪಷ್ಟನೆ ನೀಡಿದ್ದಾನೆ.