ನವದೆಹಲಿ/ ಬೆಂಗಳೂರು: ಲೋಕಸಭೆಯಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಸೂದೆ (ಎನ್ಎಂಸಿ) ಖಂಡಿಸಿ ನಾಳೆ ಖಾಸಗಿ ವೈದ್ಯರು ಅಲ್ಪಾವಧಿ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಕರೆ ನೀಡಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿರುವ ಮುಷ್ಕರದಲ್ಲಿ ಎಲ್ಲ ಖಾಸಗಿ ವೈದ್ಯರು ಭಾಗವಹಿಸಬೇಕೆಂದು ಐಎಂಎ ಸೂಚಿಸಿದೆ. ಅಲ್ಲದೆ, ಗುರುವಾರದವರೆಗೂ ಪ್ರತಿಭಟನೆ ಮುಂದುವರಿಸುವಂತೆ ಹೇಳಿದೆ. ಇದು ಹೊರರೋಗಿಗಳ ಸೇವೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗ್ತಿದೆ.
ಬೆಂಗಳೂರಿನ ಚಾಮರಾಜಪೇಟೆಯ ಎಂಎಂಎ ಎದುರು ವೈದ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ತುರ್ತು ಸೇವೆ ಮಾತ್ರ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮಸೂದೆ ಖಂಡಿಸಿ ನಿನ್ನೆಯೆ ಏಮ್ಸ್ ವೈದ್ಯರು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಗ್ರಾಮೀಣ ಭಾಗದ ವೈದ್ಯರಿಗಷ್ಟೇ ಅನುಕೂಲಕರವಾಗಿದೆ ಎಂಬುದು ವೈದ್ಯರ ಆರೋಪವಾಗಿದೆ.
ಸರ್ಕಾರಿ ವೈದ್ಯರಿಗಿಲ್ಲ ರಜೆ:
ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆ ಸರ್ಕಾರಿ ವೈದ್ಯಕೀಯ ಸಿಬ್ಬಂದಿಯ ರಜೆಗಳನ್ನು ರದ್ದು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ನಾಳೆ ರಜೆಯಲ್ಲಿರುವ ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕಿದೆ.