ನವದೆಹಲಿ: ವೈದ್ಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರೂ, ಪ್ರತಿಭಟನೆ ಕಾವು ತಣ್ಣಗಾಗಿಲ್ಲ. ಈ ಹಿಂದೆ ಭಾರತೀಯ ವೈದ್ಯಕೀಯ ಸಂಸ್ಥೆ ಘೋಷಿಸಿದಂತೆ ನಾಳೆ(ಸೋಮವಾರ) ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ.
ಇಂದು ಐಎಂಎ ತಿಳಿಸಿರುವಂತೆ, ಸೋಮವಾರ ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರ ನಡೆಯಲಿದೆ. ಹೊರರೋಗಿಗಳ ಸೇವೆ ಸೇರಿದಂತೆ, ಅತಿ ಅಗತ್ಯವಲ್ಲದ ಸೇವೆಗಳು ದೊರೆಯುವುದಿಲ್ಲ. ಆದರೆ ತುರ್ತು ಸೇವೆಗಳು ಎಂದಿನಂತೆ ಮುಂದುವರೆಯುತ್ತವೆ ಎಂದಿದೆ.
ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸೇವೆ ದೊರೆಯುವುದಿಲ್ಲ. ಇನ್ನು ರಾಜಧಾನಿ ನವದೆಹಲಿಯಲ್ಲಿ ಬೆಳಗ್ಗೆ 10 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯನ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಯಲಿದೆ ಎಂದು ಐಎಂಎ ಹೇಳಿದೆ.
ಅತ್ತ ಕೋಲ್ಕತ್ತಾದಲ್ಲಿ ಪ್ರತಿಭಟನಾನಿರತ ವೈದ್ಯರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಆದರೆ ಈ ಎಲ್ಲಾ ಮಾತುಕತೆ ತೆರೆಮರೆಯಲ್ಲಿ ನಡೆಯದೆ, ವೈದ್ಯರ ಹಾಗೂ ಮಾಧ್ಯಮಗಳ ಮುಂದೆ ನಡೆಯಬೇಕೆಂದು ಷರತ್ತನ್ನು ವೈದ್ಯರು ವಿಧಿಸಿದ್ದಾರೆ. ನಮ್ಮೆಲ್ಲಾ ಬೇಡಿಕೆಗಳನ್ನು ಸಿಎಂ ಈಡೇರಿಸಿದ್ದೇ ಆದರೆ ಕೂಡಲೇ ಕೆಲಸಕ್ಕೆ ಹಾಜರಾಗ್ತೀವಿ ಎಂದೂ ಹೇಳಿದ್ದಾರೆ.