ಮುಂಬೈ: ರಾಜ್ಯ ಪೊಲೀಸರ ಕಣ್ತಪ್ಪಿಸಿ ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲರನ್ನು ವಶಕ್ಕೆ ಪಡೆದಿದ್ದ ಬೆಳಗಾವಿ ನಗರ ಪೊಲೀಸರು, ಅವರನ್ನು ಮಹಾರಾಷ್ಟ್ರದ ಗಡಿವರೆಗೆ ಬಿಟ್ಟು ಬಂದಿರುವ ವಿಚಾರ ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ನಾಳೆ ನಾನು ಬೆಳಗಾವಿಗೆ ಆಗಮಿಸುತ್ತಿದ್ದೇನೆ. ಬೆಳಗಾವಿಗೆ ಪ್ರವೇಶ ಮಾಡುವಾಗ ತಡೆ ಹಿಡಿಯುವುದಾದ್ರೆ, ಅದನ್ನು ಕಾನೂನುಬದ್ಧವಾಗಿ ಮಾಡಿ, ಅದನ್ನು ಬಿಟ್ಟು ಬಲವಂತವಾಗಿ ಮಾಡಬೇಡಿ ಎಂದಿದ್ದಾರೆ.
ಮಹಾರಾಷ್ಟ್ರದ ಗಡಿವರೆಗೆ ಸಚಿವ ರಾಜೇಂದ್ರ ಪಾಟೀಲ್ರನ್ನು ಬಿಟ್ಟುಬಂದ ಪೊಲೀಸರು
ಎಂಇಎಸ್, ಬೆಳಗಾವಿಯಲ್ಲಿ ಹುತಾತ್ಮ ದಿನ ಕಾರ್ಯಕ್ರಮ ಆಯೋಜಿಸಿತ್ತು. ಈ ಹಿನ್ನೆಲೆ ರಾಜ್ಯ ಪೊಲೀಸರ ಸೂಚನೆ ಉಲ್ಲಂಘಿಸಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ್ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಮಹಾರಾಷ್ಟ್ರದ ಗಡಿವರೆಗೆ ಬಿಟ್ಟು ಬಂದಿದ್ದಾರೆ. ನಾಳೆಯೂ ಸಹ ಕಾರ್ಯಕ್ರಮ ನಡೆಯಲಿರುವ ಕಾರಣ ಸಂಜಯ್ ರಾವತ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಜತೆಗೆ ಬೆಳಗಾವಿಯಲ್ಲಿ ಮರಾಠಿ ಜನರನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಕೃತ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿದ್ದು, ಅಲ್ಲಿ ಹೋಗಲು ಎಲ್ಲರಿಗೂ ಅವಕಾಶವಿದೆ ಎಂದು ತಿಳಿಸಿದ್ದಾರೆ.