ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರವು ಭರದಿಂದ ಸಾಗುತ್ತಿದ್ದು, ಮತ ಸೆಳೆಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಆಮ್ ಆದ್ಮಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. ಈ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಭಾರತೀಯ ಜನತಾ ಪಕ್ಷದತ್ತ ಕ್ರೀಡಾಪಟುಗಳತ್ತ ಒಲವು ತೋರುತ್ತಿದ್ದು, ಜಗದ್ವಿಖ್ಯಾತ ಕುಸ್ತಿಪಟು, ದಿ ಗ್ರೇಟ್ ಕಲಿ ಖ್ಯಾತಿಯ ದಿಲೀಪ್‍ಸಿಂಗ್ ರಾಣಾ ಪಕ್ಷದ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ದೇಶ ಉಳಿಸಲು ಎಲ್ಲಿ ಬೇಕಾದರೂ ಪ್ರಚಾರ:
ದೆಹಲಿ ಚಾಂದನಿ ಚೌಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಮನ್ ಗುಪ್ತಾ ಅವರ ಪರ ಮಜ್ನು ಕಾ ತಿಲಾ ಪ್ರದೇಶದಲ್ಲಿ ಕಲಿ ಪ್ರಚಾರ ನಡೆಸಿದರು. ಆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಮತಯಾಚಿಸಿದರು. ಸುಮನ್ ಗುಪ್ತಾ ಅವರು ಹೋದಲೆಲ್ಲಾ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ಹೇಳಿದರು.
ಇಂದು ವಿರೋಧ ಪಕ್ಷಗಳು ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಪ್ರಚಾರ ಮಾಡಲು ಬಯಸಿದರೆ, ನಾನು ಅದನ್ನು ಮಾಡುತ್ತೇನೆ. ಅಷ್ಟೇ ಅಲ್ಲ, ಎಲ್ಲಿ ಬೇಕಾದರೂ ಪ್ರಚಾರ ಮಾಡುವೆ ಎಂದು ಹೇಳಿದರು.
ಚಾಂದನಿ ಚೌಕ್ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ತುಂಬಾ ಕಡಿಮೆ ಇದೆ. ಬಿಜೆಪಿಯಿಂದ ಸುಮನ್ ಗುಪ್ತಾ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ನಿಂದ ಅಲ್ಕಾ ಲಂಬಾ, ಆಮ್ ಆದ್ಮಿ ಪಕ್ಷವು ಪ್ರಹ್ಲಾದ್ ಸಿಂಗ್ ಸಾಹ್ನಿಗೆ ಟಿಕೆಟ್ ನೀಡಿದೆ. ಪ್ರಹ್ಲಾದ್ ಸಿಂಗ್ ಈ ಕ್ಷೇತ್ರದ ಶಾಸಕ.
ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ಅಲ್ಕಾ ಲಂಬಾ ಅವರನ್ನು ತಮ್ಮ ಪ್ರತಿಸ್ಪರ್ಧಿಯಾಗಿ ನೋಡುತ್ತಿಲ್ಲ
-ಸುಮನ್ ಗುಪ್ತಾ, ಬಿಜೆಪಿ ಅಭ್ಯರ್ಥಿ