ಇಡುಕ್ಕಿ (ಕೇರಳ): ಜಿಲ್ಲೆಯ ನೆಡುಂಕಂಡಂನ ವಲಿಯಥೋವಾಲದಲ್ಲಿರುವ ಪೂವಥೋಲಿಲ್ನಲ್ಲಿ ಗುಡ್ಡದ ಮೇಲೆ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ಕುಸಿಯುವ ಹಂತದಲ್ಲಿರುವ ಸಣ್ಣ ಮನೆಯೊಂದಿದೆ. ಈ ಮನೆಗೆ ತೆರಳಲು ಕಿರಿದಾದ ಮಾರ್ಗ ಮಾತ್ರ ಇದೆ. ಮಳೆಗಾಲದಲ್ಲಿಯೂ ಇಲ್ಲಿ ಕುಡಿವ ನೀರು ಸರಿಯಾಗಿ ಸಿಗುವುದಿಲ್ಲ. ಹಣ ಪಾವತಿಸಿ ಕುಡಿವ ನೀರು ತರಿಸಿಕೊಳ್ಳಬೇಕಾಗುತ್ತದೆ. ಇಂತಹ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ವಿಜಯನ್ ಮತ್ತು ಅವರ ಕುಟುಂಬ ವಾಸಿಸುತ್ತಿದೆ.
ವಿಜಯನ್ ಅವರಿಗೆ ದೊಡ್ಡ ಮನೆ ಕಟ್ಟಬೇಕು ಎಂಬ ಕನಸು, ಅವರ ಮಗ ಆನಂದುಗೂ ಇದೇ ಕನಸು. ಈ ಆಸೆಯಿಂದಲೇ ದುಡ್ಡು ಬಂದರೂ ಬರಬಹುದೆಂಬ ಆಸೆಯಿಂದ ಆನಂದು ಲಾಟರಿ ಟಿಕೆಟ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಹಲವು ಬಾರಿ ಸಣ್ಣ ಪುಟ್ಟ ಹಣ ಬರುವ ಮೂಲಕ ಇವರಿಗೆ ನಿರಾಸೆ ಉಂಟಾಗಿತ್ತು. ಆದರೆ, ಅಂತಿಮವಾಗಿ ಅವರ ಭಾಗ್ಯದ ಬಾಗಿಲು ತೆರೆದಿದೆ. 2020 ಸೆಪ್ಟೆಂಬರ್ 20 ರಂದು ಆನಂದು ಖರೀದಿಸಿದ್ದ ಓಣಂ ಲಾಟರಿ ಚೀಟಿಯಲ್ಲಿ ಬರೋಬ್ಬರಿ 12 ಕೋಟಿ ಬಂಪರ್ ಹಣ ಗೆದ್ದಿದ್ದಾರೆ.
ಕೋಟ್ಯಂತರ ರೂ. ಲಾಟರಿ ಗೆದ್ದಿರುವ ವಿಚಾರ ಗೊತ್ತಾಗುತ್ತಿದ್ದಂತೆ ವಿಜಯನ್ ಅವರ ಮಗ ಆನಂದುವಿಗೆ ಒಂದು ಕ್ಷಣ ನಂಬಲು ಸಾಧ್ಯವಾಗಿಲ್ಲ. ಬಳಿಕ ನಾವು ಹಣ ಗೆದ್ದಿರುವುದು ನಿಜ ಎಂದು ತಿಳಿದಾಗ ಮನೆಯವರಿಗೆ ತಿಳಿಸಿದ್ದಾನೆ. ಆರಂಭದಲ್ಲಿ ನಂಬದ ಮನೆಯವರು, ನಿಜ ವಿಷಯ ಗೊತ್ತಾಗುತ್ತಿದ್ದಂತೆ, ಸಂತೋಷದಲ್ಲಿ ತೇಲಾಡಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಈ ಬಡ ಕುಟುಂಬ ಕಂಡ ಕನಸುಗಳೆಲ್ಲ ನನಸಾಗಿದೆ. ಲಾಟರಿ ಹಣ ಬರುತ್ತಿದ್ದಂತೆ ವಿಜಯನ್ ಅವರು, ಸರಿಯಾದ ರಸ್ತೆ, ನೀರಿನ ವ್ಯವಸ್ಥೆ ಇರುವ 10 ಸೆಂಟ್ಸ್ ಜಾಗ ಖರೀದಿಸಿ ಮನೆ ಕಟ್ಟಲು ಮುಂದಾಗಿದ್ದಾರೆ.
ವಿಜಯನ್ ಕಲಾವಿದರಾಗಿದ್ದು, ಅವರ ಪತ್ನಿ ಸುಮಾ ಖಾಸಗಿ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಟರಿ ಹಣ ಬರುತ್ತಿದ್ದಂತೆ, ಸುಂದರವಾದ ಮನೆ ನಿರ್ಮಾಣದ ಜೊತೆ ಜೊತೆಗೆ, ಮಕ್ಕಳಾದ ಆನಂದು ಮತ್ತು ಅರವಿಂದ್ನನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳಿಸುವುದು. ಮಗಳನ್ನು ಮದುವೆ ಮಾಡಿಕೊಡುವುದು ಸೇರಿದಂತೆ ಹಲವು ಕನಸುಗಳು ವಿಜಯನ್ ಅವರಲ್ಲಿ ಚಿಗುರೊಡೆದಿದೆ. ವಿಜಯನ್ ಅವರ ಹಿರಿಯ ಮಗಳು ಅಧಿರಾ ಸ್ನಾತಕೋತ್ತರ ಪದವಿ ಮುಗಿಸಿ ಎರ್ನಾಕುಲಂನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೋವಿಡ್ ಸಮಯದಲ್ಲಿ ಅವರು ಕೆಲಸ ಕಳೆದುಕೊಂಡಿದ್ದರು.
ಮಕ್ಕಳಾದ ಆನಂದು ಮತ್ತು ಅರವಿಂದ್ ಪದವಿ ಮುಗಿಸಿದರೂ, ಆರ್ಥಿಕ ಸಮಸ್ಯೆಗಳಿಂದಾಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗಿಲ್ಲ. ಆನಂದು ಪ್ರಸ್ತುತ ಎರ್ನಾಕುಲಂನ ಎಲಂಕುಲಂ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು, ಅರವಿಂದ್ ಕಟ್ಟಪ್ಪನದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಯೋಚನೆ ವಿಜಯನ್ ಅವರಿಗೆ ಇನ್ನೂ ಇದೆ.