ನವದೆಹಲಿ: ಭಾರತದಲ್ಲಿ ತಯಾರುಗೊಂಡಿರುವ ಕೋವಿಡ್-19 ಲಸಿಕೆ ಕೊವಾಕ್ಸಿನ್ ಈಗಾಗಲೇ ಚಿಕಿತ್ಸಾ ಪ್ರಯೋಗಾಲದಲ್ಲಿದ್ದು, ಇದರ ಫಲಿತಾಂಶ ಆಗಸ್ಟ್ 15ಕ್ಕೆ ರಿಲೀಸ್ ಆಗುವುದು ಬಹುತೇಕ ಖಚಿತಗೊಂಡಿದೆ.
ಹೈದರಾಬಾದ್ನ ಭಾರತ್ ಬಯೋಟೆಕ್ ಈ ಔಷಧಿ ಸಿದ್ಧಪಡಿಸಿದ್ದು, ಈಗಾಗಲೇ 1ನೇ ಹಾಗೂ 2ನೇ ಹಂತದ ರೋಗಿಗಳ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.
ಈಗಾಗಲೇ 12 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಈ ಲಸಿಕೆ ಪ್ರಯೋಗ ಮಾಡಲು ಗುರುತಿಸಲಾಗಿದ್ದು, ತ್ವರಿತಗತಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಬೇಕು ಎಂದು ಐಸಿಎಂಆರ್ ಸಂಸ್ಥೆ ಪತ್ರ ಬರೆದಿದೆ.
ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಈ ಲಸಿಕೆ ಆಗಸ್ಟ್ ಫಲಿತಾಂಶ 15ರಂದು ಬಹಿರಂಗಗೊಳ್ಳಲಿದೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬ ಮಾತು ಸಹ ಕೇಳಿ ಬಂದಿದ್ದು, ಹೀಗಾಗಿ ಆದಷ್ಟು ಬೇಗ ಇದರ ಫಲಿತಾಂಶ ಪ್ರಕಟಗೊಳಿಸುವಂತೆ ಐಸಿಎಂಆರ್ ಮನವಿ ಮಾಡಿದೆ.
ಭಾರತ ಬಯೋಟೆಕ್ ಈಗಾಗಲೇ ಅನೇಕ ರೋಗಗಳಿಗೆ ಲಸಿಕೆ ಕಂಡು ಹಿಡಿದಿದ್ದು, ಅದರಲ್ಲಿ ರೊಟಾವ್ಯಾಕ್, ಟೈಫಾಯಿಡ್ ಜ್ವರ, ಚಿಕೂನ್ ಗುನ್ಯಾ ಲಸಿಕೆ ಪ್ರಮುಖವಾಗಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜತೆ ಮಾತನಾಡಿರುವ ಡಾ, ಅಮೀರಿಂದರ್ ಸಿಂಗ್ ಮಲ್ಹಿ, ಫಲಿತಾಂಶ ಬಂದಾಗ ಮಾತ್ರ ಲಸಿಕೆ ಎಷ್ಟೊಂದು ಪರಿಣಾಮಕಾರಿ ಎಂಬುದು ಗೊತ್ತಾಗಲಿದೆ. ಆದರೆ ಕೇಂದ್ರ ಸರ್ಕಾರ ಈ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹಳಷ್ಟು ಗಂಭೀರವಾಗಿದ್ದು, ಹೆಚ್ಚಿನ ಆಧ್ಯತೆ ನೀಡಿದೆ ಎಂದಿದ್ದು, ಆಗಸ್ಟ್ 15ರೊಳಗೆ ಎಲ್ಲ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿವೆ ಎಂದಿದ್ದಾರೆ.