ನವದೆಹಲಿ: ಭಾರತೀಯ ನೌಕಾಪಡೆಯನ್ನು ಮತ್ತಷ್ಟು ಪ್ರಬಲಗೊಳಿಸುವ ಸಲುವಾಗಿ ಮುಂಬರುವ ಏರೋ ಇಂಡಿಯಾ ಪ್ರದರ್ಶನದ ವೇಳೆ 83 ತೇಜಸ್ ಮಾರ್ಕ್-1ಎ ಲಘು ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಲು ಉದ್ದೇಶಿಸಿದೆ.
ಈ ಒಪ್ಪಂದದ ಜೊತೆಗೆ ಮಲ್ಟಿರೋಲ್ ಫೈಟರ್ ಏರ್ಕ್ರಾಫ್ಟ್ ಯೋಜನೆಯತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದ್ದು, ಈ ಯೋಜನೆಯಡಿಯಲ್ಲಿ 1.3 ಲಕ್ಷ ಕೋಟಿ ರೂಪಾಯಿ ಮೊತ್ತದಲ್ಲಿ ಸುಮಾರು 114 ಏರ್ಕ್ರಾಫ್ಟ್ಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಕಮಿಟಿ 83 ಮಾರ್ಕ್-1ಎ ಫೈಟರ್ ಜೆಟ್ಗಳನ್ನು ಖರೀದಿಸುವ ಸಲುವಾಗಿ ಅನುಮತಿ ನೀಡಿತ್ತು. ಇದರ ಜೊತೆಗೆ ಸುಮಾರು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಯೋಜನೆಗೂ ಒಪ್ಪಿಗೆ ನೀಡಿತ್ತು.
ಇದನ್ನೂ ಓದಿ: ಕೋರ್ಟ್ನಲ್ಲಿ ಮುಖ್ಯನ್ಯಾಯಮೂರ್ತಿ.. ಕ್ರೀಡಾಂಗಣದಲ್ಲಿ ಕ್ರಿಕೆಟಿಗ.!
ಈ ಲಘು ಯುದ್ಧ ವಿಮಾನ ನಾಲ್ಕು ಸ್ಕ್ವಾಡ್ರನ್ಗಳಲ್ಲಿರುವ ಮಿಗ್-21 ವಿಮಾನಗಳ ಬದಲಿಗೆ ಬಳಸಿಕೊಳ್ಳಲಾಗುತ್ತದೆ. ನಾವೀಗ 114 ಫೈಟರ್ ಜೆಟ್ಗಳ ಯೋಜನೆ ಕಡೆಗೆ ಗಮನ ಹರಿಸಿದ್ದೇವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈಗಾಗಲೇ ಭಾರತೀಯ ವಾಯುಪಡೆ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದು, ನಾಲ್ಕೂವರೆಗೂ ಹೆಚ್ಚಿನ ತಲೆಮಾರಿನ ವಿಮಾಗಳನ್ನು ಖರೀದಿಸಲು ಅನುಮತಿ ಕೋರಿದೆ. ಈ ವಿಮಾನಗಳು ಈಗಾಗಲೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿರುವ ರಫೇಲ್ ಯುದ್ಧ ವಿಮಾನಗಳಿಗೆ ಸರಿಸಾಟಿ ಎನ್ನಲಾಗುತ್ತದೆ.
ಬೇರೆ ದೇಶಗಳ ಯುದ್ಧ ವಿಮಾನ ತಯಾರಿಕಾ ಸಂಸ್ಥೆಗಳಿಗೂ ಮಾಹಿತಿ ಮನವಿ (ರಿಕ್ವೆಸ್ಟ್ ಫಾರ್ ಇನ್ಫಾರ್ಮೇಷನ್) ಸಲ್ಲಿಸಿದ್ದು, ಅಮೆರಿಕ, ಫ್ರಾನ್ಸ್, ರಷ್ಯಾ ಹಾಗೂ ಸ್ವೀಡನ್ ದೇಶಗಳು ಮನವಿಗೆ ಸ್ಪಂದಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.