ನವದೆಹಲಿ: ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರ ಮಾಡುವ ದಿನಾಂಕ ಅಂತಿಮವಾಗಿದೆ.
ಸೆಪ್ಟೆಂಬರ್ 19ರಂದು ಫ್ರಾನ್ಸಿನ ಮೆರಿಗ್ನಾಕ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತಕ್ಕೆ ಮೊದಲ ಹಂತದ ರಫೇಲ್ ಯುದ್ಧ ವಿಮಾನದ ಹಸ್ತಾಂತರವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಭಾಗಿಯಾಗಲಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಫ್ರಾನ್ಸ್ ಸರ್ಕಾರ ನಾಲ್ಕು ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ ಮಾಡಲಿದೆ. ಆದರೆ ಈ ಯುದ್ಧ ವಿಮಾನಗಳು ಮುಂದಿನ ವರ್ಷದ ಎಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಭಾರತಕ್ಕೆ ಆಗಮಿಸಲಿವೆ. ಒಪ್ಪಂದದ ಅನ್ವಯ ಫ್ರಾನ್ಸ್ ಒಟ್ಟು 36 ರಫೇಲ್ ಫೈಟರ್ ಜೆಟ್ ನೀಡಲಿದ್ದು, 2022ರ ಸೆಪ್ಟೆಂಬರ್ನಲ್ಲಿ ಈ ಎಲ್ಲ 36 ಯುದ್ಧ ವಿಮಾನ ಭಾರತಕ್ಕೆ ಬರಲಿವೆ.
ಮೂರು ವರ್ಷದ ಹಿಂದಿನ ಒಪ್ಪಂದಕ್ಕೆ ಮೊದಲ ಮುನ್ನಡೆ:
2016ರ ಸೆಪ್ಟೆಂಬರ್ 23ರಂದು ಭಾರತ ಸರ್ಕಾರ ಫ್ರಾನ್ಸ್ ಜೊತೆ ರಫೇಲ್ ಯುದ್ಧ ವಿಮಾನ ಆಮದು ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. 59,000 ಕೋಟಿಯ ಈ ಒಪ್ಪಂದ ಲೋಕಸಭಾ ಚುನಾವಣೆ ವೇಳೆ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.
ಯಾಕೀ ಒಪ್ಪಂದ..?
ಭಾರತೀಯ ವಾಯುಸೇನೆಯಲ್ಲಿ ಯುದ್ಧ ವಿಮಾನಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದ್ದನ್ನು ಪರಿಗಣಿಸಿ ಕೇಂದ್ರ ಸರ್ಕಾರ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಚೀನಾ ಹಾಗೂ ಪಾಕಿಸ್ತಾನ ಜೊತೆಗೆ ಯುದ್ಧಕ್ಕಿಳಿದರೆ 42ಕ್ಕೂ ಅಧಿಕ ಯುದ್ಧ ವಿಮಾನಗಳ ಅಗತ್ಯ ಭಾರತಕ್ಕಿದ್ದು, ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿರುವ ಯುದ್ಧ ವಿಮಾನಗಳ ಸಂಖ್ಯೆ 31. ಜೊತೆಗೆ ಭಾರತ ಖರೀದಿ ಮಾಡುತ್ತಿರುವ ರಫೇಲ್ ಯುದ್ಧ ವಿಮಾನ ಅತ್ಯಾಧುನಿಕವಾಗಿದ್ದು, ಸೇನೆ ಬಲ ತುಂಬಲಿದೆ.