ಹೈದ್ರಾಬಾದ್: 26 ವರ್ಷದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನ್ಯಾಯಾಧೀಶರು ಇಲ್ಲದ ಕಾರಣ ಮತ್ತು ಪೊಲೀಸ್ ಠಾಣೆಯ ಹೊರಗಡೆ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣದಿಂದ ಆರೋಪಿಗಳನ್ನು ಮಹಬೂಬ್ ನಗರದ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತೆಲಂಗಾಣದ ಶಾದ್‌ನಗರ ಪಟ್ಟಣದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಆರೋಪಿಗಳಾದ ಮೊಹಮದ್ ಆರಿಫ್, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್ನನ್ನು ಮಹಬೂಬ್‌ನಗರ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯ ಹೊರಗಡೆ ಉದ್ವಿಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಹಿಂಭಾಗಿಲಿನಿಂದ ಪೊಲೀಸ್ ಠಾಣೆಗೆ ಮ್ಯಾಜಿಸ್ಟ್ರೇಟ್ ಅವರನ್ನು ಕರೆತರಲಾಗಿತ್ತು.
ಮೃತ ಪಶುವೈದ್ಯೆಯ ಮನೆಗೆ ತೆಲಂಗಾಣ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.